ಮೈಸೂರು : ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಹಿರಿಯ ಶಾಸಕ ಎಸ್.ಎ ರಾಮದಾಸ್ ಅಸಮಧಾನ ವ್ಯಕ್ತಪಡಿಸಿದ್ದು, ಆ ವ್ಯಕ್ತಿಯ ಕಾಲ್ ನಿಂದ ಸಚಿವ ಸ್ಥಾನ ತಪ್ಪಿತು ಎಂದಿದ್ದಾರೆ.
ಮೈಸೂರಿನ ಕೆ.ಆರ್ ವಿಧಾನಸಭಾ ಕ್ಷೇತ್ರದ ವಿಶ್ವೇಶ್ವರ ನಗರದಲ್ಲಿ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ನನ್ನ ತಲೆ ಮೇಲೆ ಕೈ ಇಟ್ಟು ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ದರು.
ಪಕ್ಷದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಕೂಡ ನೀವು (ರಾಮದಾಸ್) ಸೀನಿಯರ್ ಮೋಸ್ಟ್ ಇದ್ದೀರಿ, ಸಚಿವ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ದೆಹಲಿಗೆ ಆ ವ್ಯಕ್ತಿ ಕರೆ ಮಾಡಿದ್ದರಿಂದ ನನ್ನ ಹೆಸರನ್ನು ಲಿಸ್ಟ್ನಿಂದ ತೆಗೆಯಲಾಯಿತು ಎಂದು ಹೇಳಿದರು.
ಓದಿ : ಪಕ್ಷ ಬಹು ದೊಡ್ಡ ಜವಾಬ್ದಾರಿಯಿಂದ ನನಗೆ ಈ ಸ್ಥಾನ ಕೊಟ್ಟಿದೆ: ಶಂಕರ ಪಾಟೀಲ ಮುನೇನಕೊಪ್ಪ
ಅಧಿಕಾರ, ಅಂತಸ್ತು ಯಾವುದೂ ಶಾಶ್ವತವಲ್ಲ. ಮಂತ್ರಿ ಮಾಡಿದರೆ ರಾಜ್ಯದ ಜನರ ಸೇವೆ ಮಾಡಲು ಅವಕಾಶ ಸಿಗುತ್ತಿತ್ತು. ಈಗಲೂ ಬೇಜಾರು ಇಲ್ಲ. ನನ್ನ ಕ್ಷೇತ್ರಕ್ಕಾಗಿಯೇ ಮತ್ತಷ್ಟು ದುಡಿಯುತ್ತೇನೆ ಎಂದು ಹೇಳುವ ಮೂಲಕ ಸಚಿವ ಸ್ಥಾನ ಸಿಗದಿರುವ ಬಗ್ಗೆ ನೋವು ವ್ಯಕ್ತಪಡಿಸಿದರು.
ಶಾಸಕ ರಾಮ್ದಾಸ್ ಹೇಳಿರುವ ಆ ವ್ಯಕ್ತಿ ಯಾರು ಎಂದು ಗೊತ್ತಾಗಿಲ್ಲ. ಆದರೂ, ಬಿಜೆಪಿ ನಾಯಕರಲ್ಲಿ ಪರಸ್ಪರ ಶೀತಲ ಸಮರ ಇರುವುದಂತೂ, ಶಾಸಕರ ಹೇಳಿಕೆಯಿಂದ ಖಚಿತವಾಗಿದೆ.