ಮೈಸೂರು : ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಹಿನ್ನೆಲೆ ತಿ. ನರಸೀಪುರ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಅಶ್ವಿನ್ ಕುಮಾರ್ ಹಾಗೂ ಡಿಡಿಪಿಐ ಭೇಟಿ ನೀಡಿದರು. ವಿದ್ಯಾರ್ಥಿನಿಯ ಮೃತದೇಹ ನೋಡಿ, ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಅಷ್ಟೇ ಅಲ್ಲದೇ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆರೋಗ್ಯಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಯಿಂದ ಅಶ್ವಿನ್ ಕುಮಾರ್ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ಇಂತಹ ಘಟನೆ ತಾಲೂಕಿನಲ್ಲಿ ನಡೆಯಬಾರದಿತ್ತು. ಈಗಾಗಲೇ ಅಧಿಕಾರಿಗಳಿಂದ ಕೆಲ ಮಾಹಿತಿ ಕಲೆ ಹಾಕಲಾಗಿದೆ.
ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಆದಷ್ಟು ಬೇಗ ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆ ನಡೆಸಿ, ಶವ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರದಿಂದ ಪರಿಹಾರ ನೀಡಿದ್ದಾರೆ. ನಾನು ಸಹ ವೈಯಕ್ತಿಕವಾಗಿ ಸಹಾಯ ನೀಡುತ್ತೇನೆ. ಈ ಘಟನೆಯಿಂದ ಬಹಳ ನೋವಾಗಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪರೀಕ್ಷೆ ಬರೆಯುತ್ತಿದ್ದ ವೇಳೆಯೇ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ
ನಂತರ ಮಾತನಾಡಿದ ಡಿಡಿಪಿಐ ರಾಮಚಂದ್ರ ರಾಜೇ ಅರಸ್, ವಿದ್ಯಾರ್ಥಿನಿ ಅನುಶ್ರೀ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ರೀತಿಯ ಮುಂಜಾಗ್ರತ ಕ್ರಮವನ್ನ ಕೈಗೊಳ್ಳಲಾಗಿತ್ತು. ಕೋವಿಡ್ ಪರೀಕ್ಷೆ ಜೊತೆಗೆ ವಿದ್ಯಾರ್ಥಿಗಳ ತಾಪಮಾನ ಪರೀಕ್ಷೆಯನ್ನು ಸಹ ಆರೋಗ್ಯ ಇಲಾಖೆ ಸಿಬ್ಬಂದಿ ನಡೆಸಿದ್ದರು. ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತದೆ ಎಂದರು.
ಅನುಶ್ರೀ ಕುಟುಂಬಕ್ಕೆ 1 ಲಕ್ಷ ಪರಿಹಾರ: ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಅನುಶ್ರೀ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.