ಮೈಸೂರು: ಮದುವೆ ಮಾಡಲು ಹೊರಟ ಅಪ್ಪನ ನಡೆಯಿಂದ ಬೇಸತ್ತ ಅಪ್ರಾಪ್ತ ಬಾಲಕಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ತಾವರೆಕಟ್ಟೆ ಮೋಳೆ ಗ್ರಾಮದ ಸಿದ್ದಶೆಟ್ಟಿ ಎಂಬುವರ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ. ಈಕೆಯ ತಂದೆ ಮಗಳನ್ನು ಶಾಲೆ ಬಿಡಿಸಿ ಮದುವೆ ಮಾಡಲು ಮುಂದಾಗಿದ್ದರು. ತಂದೆಯ ಈ ವರ್ತನೆಯಿಂದ ಬೇಸತ್ತ ಬಾಲಕಿ ತಿ.ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಇರುವ ನದಿಗೆ ಹಾರಲು ಯತ್ನಿಸಿದ್ದಳು.
ಓದಿ: ಹುಬ್ಬಳ್ಳಿಯಲ್ಲಿ ಹಾಡಹಗಲೇ ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಮಾರಣಾಂತಿಕ ಹಲ್ಲೆ
ಇದನ್ನು ಕಂಡ ಸ್ಥಳೀಯರು ಬಾಲಕಿಯನ್ನು ರಕ್ಷಿಸಿ ತಿ.ನರಸೀಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ಅಧಿಕಾರಿಗಳು ಈಕೆಯ ಪೋಷಕರನ್ನು ಕರೆಸಿ ಬಾಲಕಿಗೆ ವಿದ್ಯಾಭ್ಯಾಸ ನೀಡುವಂತೆ ತಿಳಿವಳಿಕೆ ಹೇಳಿ ಪೋಷಕರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.