ಮೈಸೂರು: ಮೇಯರ್ ಆಯ್ಕೆಗೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗುತ್ತೇನೆ. ಇನ್ನೂ ಭೇಟಿಯಾಗಿಲ್ಲ. ಪಕ್ಷದ ಅಧ್ಯಕ್ಷರು, ಲೋಕಸಭಾ ಸದಸ್ಯರು, ಶಾಸಕರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಿಜೆಪಿಯವರೇ ಮೇಯರ್ ಆಗುವ ವಿಶ್ವಾಸವಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
120 ಕೋಟಿ ರೂಪಾಯಿ ವೆಚ್ಚದ ಮೈಸೂರಿನ ರಿಂಗ್ ರೋಡ್ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಹೋರಾಟಕ್ಕೆ ಸಂಬಂಧಪಟ್ಟಂತೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಗ್ಗೆ ಸಂಪುಟ ಸಭೆಯಲ್ಲೂ ಸಹ ಒಂದು ಮಟ್ಟದ ಚರ್ಚೆಗಳೂ ಆಗಿವೆ ಎಂದರು.
ಮೈಸೂರು ರಿಂಗ್ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದ್ದೇವೆ. ಇಲ್ಲೇ ಸುತ್ತ ಮುತ್ತಲು ಇರುವ ಡಬ್ರೀಸ್ ಗಳನ್ನು ತೆರವುಗೊಳಿಸಲಾಗಿದೆ. ಆದರೆ, ಇನ್ನು ಮುಂದೆ ಎಲ್ಲೆಂದರಲ್ಲಿ ಯಾರೇ ಡಬ್ರೀಸ್ ಹಾಕಿದರೆ ಅವರಿಗೆ ಜೈಲು ಶಿಕ್ಷೆ ಹಾಗೂ ದಂಡ ಬೀಳಲಿದೆ. ಜತೆಗೆ ಡೆಬ್ರಿಸ್ ತಂದು ಹಾಕುವ ವಾಹನಗಳು ಜಪ್ತಿ ಗೊಳ್ಳಲಿದೆ ಎಂದು ಹೇಳಿದರು.
ಕಸ ತಂದು ಹಾಕುವ ವಾಹನ ಮಾಲೀಕರು ಸಹ ಕಾರಾಗೃಹ ವಾಸ ಅನುಭವಿಸಬೇಕಾಗುತ್ತದೆ. ಡೆಬ್ರಿಸ್ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಒಂದು ವೇಳೆ ಮತ್ತೆ ಯಾರಾದರೂ ಡೆಬ್ರಿಸ್ ಹಾಕಿದರೆ ಜೈಲುವಾಸ ಪಕ್ಕಾ ಆಗಲಿದೆ. ಮುಡಾದವರು ತೋರಿಸಿದ ಜಾಗದಲ್ಲಿ ಹಾಕಬೇಕು. ಅದು ಬಿಟ್ಟು ಎಲ್ಲಾ ಕಡೆ ಈ ಮೊದಲಿನಂತೆ ಹಾಕಲು ಹೋದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಚಿತ್ರದುರ್ಗದಲ್ಲಿ ಎಪಿಎಂಸಿ ಮಾದರಿಯಲ್ಲಿ ಖಾಸಗಿ ಮಾರುಕಟ್ಟೆ ನಿರ್ಮಾಣವಾಗುವ ಬಗ್ಗೆ ತಾನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಈ ಮಾರುಕಟ್ಟೆಯು ಸುಮಾರು 100 ಎಕರೆ ವಿಸ್ತೀರ್ಣದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಇಂತಹ ಬೆಳವಣಿಗೆಗಳು ಆಗಬೇಕು. ರೈತರಿಗೆ ಉತ್ತಮ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ಪೈಪೋಟಿ ಎದುರಾದರೆ ತಪ್ಪೇನಿಲ್ಲ. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ನಾನು ಸಹ ಚಿತ್ರದುರ್ಗಕ್ಕೆ ಹೋದಾಗ ಆ ಯೋಜನೆ ಬಗ್ಗೆ ಪರಿಶೀಲಿಸುತ್ತೇನೆ ಎಂದರು.
ಇದೆ ವೇಳೆ, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.