ಮೈಸೂರು: ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗೆ ಹಣ ಸಂಗ್ರಹ ವಿಚಾರದಲ್ಲಿ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳ ಪಾತ್ರವಿಲ್ಲ. ಈಗ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಅದು ಆದೇಶವಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟೀಕರಣ ನೀಡಲು ಮುಂದಾಗಿ ತಡಬಡಿಸಿದ ಪ್ರಸಂಗ ನಡೆಯಿತು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅದು ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ 100 ರೂಪಾಯಿ ಹಣ ಸಂಗ್ರಹ ಕುರಿತು ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿರುವ ಸುತ್ತೋಲೆ. ನಮಗೆ ಹಾಗೂ ಮುಖ್ಯಮಂತ್ರಿಗಳಿಗೆ ಇದು ಸಂಬಂಧ ಇಲ್ಲ. ಈ ಬಗ್ಗೆ ಕೆಲವರು ಸುತ್ತೋಲೆಯನ್ನು ಸರಿಯಾಗಿ ಓದಿಕೊಳ್ಳದೆ ನಾನಾ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದರು.
ಶಿಕ್ಷಣ ಇಲಾಖೆಯ ಆಯುಕ್ತರು ಶಾಲೆಯ ಎಸ್ಡಿಎಂಸಿ ಸಲಹೆ ಮೇರೆಗೆ ಸುತ್ತೋಲೆಗಳನ್ನು ಹೊರಡಿಸಿದ್ದಾರೆ. ಈ ಸಂಬಂಧ ಆಯುಕ್ತರಿಗೆ ಗೊಂದಲಗಳನ್ನು ನಿವಾರಿಸಲು ಸುತ್ತೋಲೆ ಹೊರಡಿಸಲು ಸಂವಿಧಾನದಲ್ಲಿ ಅವಕಾಶವಿದೆ. ಸುತ್ತೋಲೆ ಹೊರಡಿಸುವಾಗ ಸರ್ಕಾರದ ಗಮನಕ್ಕೆ ತರಬೇಕು ಎಂಬುದು ಇಲ್ಲ. ಶಾಲೆಯ ಅಭಿವೃದ್ಧಿಗೆ ಸ್ಥಳೀಯವಾಗಿ ಹಣ ಸಂಗ್ರಹಿಸಲು ಆರ್ಟಿಇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
ಒಳ್ಳೆ ಕಾಯ್ದೆ ಇದು. ಇದನ್ನು ಸಿದ್ದರಾಮಯ್ಯ ಸರ್ಕಾರವೇ ಜಾರಿಗೆ ತಂದಿದ್ದು, ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರು ಕಡ್ಡಾಯವಾಗಿ ಹಣ ಕೊಡಬೇಕು ಎಂದು ಸುತ್ತೋಲೆಯಲ್ಲಿಲ್ಲ. ಅವರಾಗಿ ಕೊಟ್ಟರೆ 100 ರೂಪಾಯಿವರೆಗೆ ಕೊಡಬಹುದು ಅದಕ್ಕೆ ರಶೀದಿ ಪಡೆದುಕೊಳ್ಳಬೇಕು. ಈ ರೀತಿ ಸಂಗ್ರಹವಾದ ಹಣದಲ್ಲಿ ಶಾಲೆಯ ಅಭಿವೃದ್ಧಿ ಹಾಗೂ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭ ಮಾಡಬಹುದು. ಇದೆಲ್ಲವನ್ನು ಶಾಲೆಯ ಎಸ್ಡಿಎಂಸಿ ತೀರ್ಮಾನ ಕೈಗೊಳ್ಳುತ್ತದೆ. ಸುತ್ತೋಲೆ ದುರುಪಯೋಗವಾದರೆ ಹಿಂಪಡೆಯಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರು ಸರ್ಕಾರದ ಗಮನಕ್ಕೆ ಬರದೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಬಹುದೇ, ಸುತ್ತೋಲೆಗೂ ಹಾಗೂ ಆದೇಶಕ್ಕೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಶಿಕ್ಷಣ ಸಚಿವರು ಉತ್ತರಿಸಲು ತಡಬಡಿಸಿದರು.
ಇದನ್ನೂ ಓದಿ: ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ: ಪ್ರಕರಣ ಸಿಐಡಿ ತನಿಖೆ.. ಸಚಿವ ಬಿ ಸಿ ನಾಗೇಶ್