ಮೈಸೂರು: ರಾಜ್ಯ ಬಿಜೆಪಿ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಬೇಕಿಲ್ಲ. ಕೇಂದ್ರ ಬಿಜೆಪಿಯಿಂದಲೇ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಜೆಡಿಎಸ್ ಪಕ್ಷದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ಇದ್ದಂಗೆ ಕಾಣಿಸುತ್ತಿಲ್ಲ. ಮುಖ್ಯಮಂತ್ರಿಗಳಿಗೆ ಅಧಿಕಾರ ನಡೆಸುವ ಸ್ವತಂತ್ರ ಇಲ್ಲ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.
ನೆರೆ ಪರಿಸ್ಥಿತಿಯಿಂದ ಜನರು ಬೀದಿಯಲ್ಲಿ ಮಲಗಿದ್ದಾರೆ. ರಾಜ್ಯದ ವಸತಿ ಸಚಿವರು ದಸರಾ ಸಂಭ್ರಮದಲ್ಲಿ ಮುಳುಗಿದ್ದಾರೆ. ವಸತಿ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಸಚಿವ ಸೋಮಣ್ಣ ವಿರುದ್ಧ ಕಿಡಿಕಾರಿದರು.
ಕೇಂದ್ರದಿಂದ ರಾಜ್ಯದ ನೆರೆ ಪರಿಹಾರಕ್ಕೆ ಬಿಡುಗಾಸು ಬಂದಿಲ್ಲ. ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಲು ಮುಖ್ಯಮಂತ್ರಿಗಳಿಗೆ ಭಯ. ಏಕೆಂದರೆ ಪ್ರಧಾನಿ ಅವರು ಕೇಂದ್ರ ಮಂತ್ರಿಗಳನ್ನೇ ಹತ್ತಿರಕ್ಕೆ ಸೇರಿಸುವುದಿಲ್ಲ. ಇನ್ನು ಯಡಿಯೂರಪ್ಪ ಹಾಗೂ ರಾಜ್ಯದ ಮಂತ್ರಿಗಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಾರೆಯೇ ಎಂದು ಮೂದಲಿದರು.
ಸಿಬಿಐ ಹೊರತುಪಡಿಸಿ ಅಂತಾರಾಷ್ಟ್ರೀಯ ತನಿಖಾ ತಂಡಗಳನ್ನು ಕರೆದುಕೊಂಡು ಬಂದರೂ ನನ್ನ ಏನೂ ಮಾಡಲು ಸಾಧ್ಯವಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿದ್ದೇನೆ ಎಂದು ಏರು ಧ್ವನಿಯಲ್ಲಿಯೇ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.