ಮೈಸೂರು: ರಾಜ್ಯದಲ್ಲಿ ಸರ್ಕಾರ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಆಡಳಿತ ನಡೆಸುತ್ತಿದ್ದು, ರಾಷ್ಟ್ರಪತಿ ಆಳ್ವಿಕೆ ತಂದು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಸಬೇಕು ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ರೈಲ್ವೆ ನಿಲ್ದಾಣ ಕಚೇರಿ ಸಮೀಪ ಕಪ್ಪು ಕಂಬಳಿ ಮೇಲೆ ಮಲಗಿ ಪ್ರತಿಭಟನೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಇಂದಿನ ರಾಜ್ಯಪಾಲರನ್ನು ನೋಡಿದರೆ ಮಧ್ಯಂತರ ಚುನಾವಣೆ ಬರುವುದು ಅನುಮಾನವಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಈ ಮೂರೂ ಪಕ್ಷಗಳು ಅಧಿಕಾರಿಕ್ಕಾಗಿ ಕಿತ್ತಾಡುತ್ತಿವೆ ಎಂದು ಕಿಡಿಕಾರಿದರು.
ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟು ಕ್ಷೇತ್ರಕ್ಕೆ ತೆರಳಿ ಜನರೊಂದಿಗೆ ಚರ್ಚಿಸದೆ ರೆಸಾರ್ಟ್ನಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆ. ಇದರ ಬಗ್ಗೆ ರಾಷ್ಟ್ರಪತಿ, ಪ್ರಧಾನಿ, ಚುನಾವಣಾ ಆಯೋಗ ಮಾತನಾಡುತ್ತಿಲ್ಲ. 50 ವರ್ಷಗಳ ನನ್ನ ಹೋರಾಟದ ಬದುಕಿನಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನೋಡಿರಲಿಲ್ಲ. ಈ ಸರ್ಕಾರದಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಹಿಂದೆ ಆಳ್ವಿಕೆ ನಡೆಸಿದ ರಾಜಕೀಯ ಗಣ್ಯರು ದೇಶದಲ್ಲಿಯೇ ಭೇಶ್ ಎನ್ನಿಸಿಕೊಂಡಿದ್ದರು. ಆದರೆ ಇವತ್ತಿನ ರಾಜಕಾರಣ ನೋಡಿದರೆ ಬೇಸರವಾಗುತ್ತದೆ ಎಂದರು.
ಸ್ವೀಕರ್ ರಮೇಶ್ ಕುಮಾರ್ ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ ಇಂತಹ ವ್ಯಕ್ತಿಯನ್ನು ಸ್ವೀಕರ್ ಸ್ಥಾನದಿಂದ ಕೆಳಗಿಸಲು ಬಿಜೆಪಿ ಮುಂದಾಗಿರುವುದು ದುರಂತ. ಮಧ್ಯಂತರ ಚುನಾವಣೆ ಬಂದರೆ ಬೆಂಗಳೂರಿನಲ್ಲಿ ಸ್ಫರ್ಧೆ ಮಾಡುತ್ತೀನಿ ಎಂದರು.