ಮೈಸೂರು: ಐರ್ಲೆಂಡ್ನ ಡುಬ್ಲಿನ್ನಲ್ಲಿ ಮೈಸೂರು ಮೂಲದ ವ್ಯಕ್ತಿ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಗಂಡನೇ ಹತ್ಯೆ ಮಾಡಿದ್ದಾನೆ ಎಂದು ಹೆಂಡತಿ ಮನೆಯವರು ಆರೋಪಿಸಿದ್ದಾರೆ.
ಮೈಸೂರು ಜಿಲ್ಲೆಯ ಬೆಟ್ಟದಪುರ ಸಮೀಪದ ಹಲಗನಹಳ್ಳಿ ಗ್ರಾಮದ ಅಬ್ದುಲ್ ಗಫಾರ್ ಹಾಗೂ ಖುರ್ಷಿದ್ ಉನ್ನೀಸಾ ಎಂಬ ದಂಪತಿಯ ಮಗಳಾದ ಸೀಮಾ ಬಾನು ಡಂಬುವವಳನ್ನು 13 ವರ್ಷದ ಹಿಂದೆ ಮೈಸೂರು ನಗರದ ಟೆಕ್ಕಿ ಸಯ್ಯುದ್ ಸಮೀರ್ ಎಂಬುವವನ ಜೊತೆ ಮದುವೆ ಮಾಡಲಾಗಿತ್ತು. ಇಬ್ಬರಿಗೆ ಅಸ್ತೀಫಾ (11) ಹಾಗೂ ಫೈಜಾಜ್ (6) ಎಂಬ ಮಕ್ಕಳು ಇದ್ದು, ಕಳೆದ ವರ್ಷ ಟೆಕ್ಕಿ ಐರ್ಲೆಂಡ್ಗೆ ಕೆಲಸಕ್ಕೆ ಹೋಗಿದ್ದ.
ಈ ಸಂದರ್ಭದಲ್ಲಿ ಗಂಡ ಹೆಂಡತಿಯ ನಡುವೆ ಗಲಾಟೆಯಾಗಿ ಭಾರತಕ್ಕೆ ಬಂದಿದ್ದರು. ಈ ಸಂಬಂಧ ಹೆಂಡತಿ ಸೀಮಾ ಬಾನು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಾಗುತ್ತಿದಂತೆ ಗಂಡ ಲಂಡನ್ಗೆ ಪರಾರಿಯಾಗಿದ್ದ. ನಂತರ ಇನ್ಮುಂದೆ ಹೊಂದಿಕೊಂಡು ಬಾಳೋಣ ಎಂದು ಹೆಂಡತಿ ಮಕ್ಕಳನ್ನು ಕರೆಸಿಕೊಂಡಿದ್ದ.
ಸೋದರನ ಆರೋಪ:
ಸೀಮಾ ಬಾನು ಸೋದರ ಮಾಧ್ಯಮಗಳ ಜೊತೆ ಮಾತನಾಡಿ, ನನ್ನ ಸೋದರಿ ಮತ್ತು ಮಕ್ಕಳನ್ನು ಸೋದರಿಯ ಗಂಡನೇ ಕೊಲೆ ಮಾಡಿದ್ದಾನೆ. ಕಳೆದ 13 ವರ್ಷಗಳ ಹಿಂದೆ ಇಬ್ಬರಿಗೂ ಮದುವೆ ಮಾಡಿಕೊಡಲಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಗಂಡ ಹೆಂಡತಿ ನಡುವೆ ಜಗಳವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೊನೆಗೆ ಇಬ್ಬರು ಮಕ್ಕಳೊಂದಿಗೆ ತಂಗಿ ನಮ್ಮ ಮನೆಗೆ ಬಂದಿದ್ದಳು.
ಈ ಸಂದರ್ಭದಲ್ಲಿ ಗಂಡ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಐರ್ಲೆಂಡ್ಗೆ ಕರೆಸಿಕೊಂಡು, ಅಲ್ಲಿಯೂ ಮನೆಯಲ್ಲಿ ಗಲಾಟೆಯಾಗಿ ಹೆಂಡತಿಗೆ ಹೊಡೆದಿದ್ದ. ಈ ಸಂಬಂಧ ಅಲ್ಲಿಯೂ ದೂರು ದಾಖಲಾಗಿತ್ತು. ಪೋಲಿಸರು ಸಯ್ಯದ್ ಸಮೀರ್ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದರು. ತಂಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದಳು. ಕೇಸ್ ವಿಚಾರಣೆ ಮುಗಿಸಿಕೊಂಡು ಮನೆಗೆ ಬಂದ ಆತ ಮನೆಯಲ್ಲಿದ್ದ ಸಿಸಿಟಿವಿಯನ್ನು ಆಫ್ ಮಾಡಿ ಇಬ್ಬರು ಮಕ್ಕಳು ಮತ್ತು ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ಸೀಮಾ ಬಾನು ತಮ್ಮ ಮೊಹಮ್ಮದ್ ಖಾಸರ್ ಆರೋಪಿಸಿದ್ದಾರೆ.
ತಾಯಿ ಖುರ್ಷಿದ್ ಉನ್ನೀಸಾ ಮಾತನಾಡಿ, ಅಕ್ಟೋಬರ್ 25ರಂದು ಮಗಳು ವಿಡಿಯೋ ಕಾಲ್ ಮಾಡಿ ತನಗೆ ನೀಡುತ್ತಿದ್ದ ಚಿತ್ರ ಹಿಂಸೆ ಬಗ್ಗೆ ವಿವರಿಸಿದ್ದು, ನನ್ನ ಮಗಳು ಮತ್ತು ಮೊಮ್ಮಕಳನ್ನು ಆತನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಸಂಸದರಲ್ಲಿ ಮನವಿ:
ಐರ್ಲೆಂಡ್ನ ಡುಬ್ಲಿನ್ನಲ್ಲಿ ಕೊಲೆಯಾಗಿರುವ ಮಗಳು ಹಾಗೂ ಮೊಮ್ಮಕ್ಕಳ ಮೃತ ದೇಹವನ್ನು ತರಿಸಿಕೊಡುವಂತೆ ಕುಟುಂಬಸ್ಥರು ಸಂಸದ ಪ್ರತಾಪ್ ಸಿಂಹ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.