ಮೈಸೂರು: ಸಮ್ಮಿಶ್ರ ಸರ್ಕಾರದ ಬಹುಮತ ಕುಸಿದಿದೆ. ಮಾನ-ಮಾರ್ಯದೆ ಇದ್ರೇ ಜೆಡಿಎಸ್-ಕಾಂಗ್ರೆಸ್ನವರು ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಹೇಳಿದ್ದಾರೆ.
ಮೈಸೂರಿನ ಕಾಡಾ ಕಚೇರಿ ಸಮೀಪ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳು ಕಳೆದಿದೆ. ಅವರ ಕ್ಷೇತ್ರದಲ್ಲಿ ಕೆಲಸಗಳು ಆಗುತ್ತಿಲ್ಲ ಎಂದು ಮನನೊಂದು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿದಿದ್ದು, ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ಹೊರಬರಬೇಕಿದೆ ಎಂದು ಕಿಡಿಕಾರಿದರು.
ಕಳೆದ ಒಂದು ವಾರದಿಂದ ವಿಧಾನಸಭಾ ಕಲಾಪದಲ್ಲಿ ಜೆಡಿಎಸ್-ಕಾಂಗ್ರೆಸ್ನವರು ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಸಂಖ್ಯಾಬಲ ಇರುವ ಪಕ್ಷಕ್ಕೆ ಆಡಳಿತ ನಡೆಸಲು ಅನುಕೂಲ ಮಾಡಿಕೊಡಬೇಕು. ಸ್ವೀಕರ್ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ. ಅಲ್ಲದೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಂದರೆ ಆಡಳಿತ ಅಧಿಕಾರ ಅಧಿಕಾರಿಗಳ ಕೈಗೆ ಸಿಲುಕಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಹೇಳಿದರು.