ಮೈಸೂರು: ಕೆಲವರು ಅನಾವಶ್ಯಕವಾಗಿ ಸುಳ್ಳು ದೂರುಗಳನ್ನು ದಾಖಲಿಸುವವರಿದ್ದಾರೆ. ಆ ರೀತಿ ಸುಳ್ಳು ದೂರು ನೀಡುವವರಿಗೆ ಜೈಲು ಶಿಕ್ಷೆ ವಿಧಿಸಿ, ಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತರಿಗೆ ಇದೆ ಎಂದು ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ನಾವು ಈಗಾಗಲೇ 7 ಜಿಲ್ಲೆಗಳಲ್ಲಿ ಅಹವಾಲು ಸ್ವೀಕಾರ ಮಾಡಿದ್ದೇವೆ. ಇದು 8ನೇ ಜಿಲ್ಲೆಯಾಗಿದ್ದು ಕಾರ್ಯಕ್ರಮದ ಉದ್ದೇಶ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದ ಮೇಲೆ ನಡೆಯುತ್ತಿದೆ. ಸರ್ಕಾರದ 3 ಅಂಗಗಳು ತಮ್ಮ ತಮ್ಮ ಕಾರ್ಯಗಳನ್ನು ನ್ಯಾಯುತವಾಗಿ ಮಾಡಬೇಕು. ಶಾಸಕಾಂಗ ಕಾನೂನುಗಳನ್ನು ರಚಿಸಿದರೆ, ಆ ಕಾನೂನುಗಳನ್ನು ಕಾರ್ಯಾಂಗ ಜಾರಿಗೆ ತಂದು ಜನರಿಗೆ ತಲುಪಿಸುತ್ತದೆ. ಜನರಿಗೆ ನೀಡಿರುವ ಕಾನೂನು, ಹಕ್ಕುಗಳ ಉಲ್ಲಂಘನೆಗೆ ಆದಾಗ ನ್ಯಾಯಾಂಗ ಇದನ್ನು ಸರಿಪಡಿಸುವ ಕಾರ್ಯ ಮಾಡುತ್ತದೆ. ಮಾಧ್ಯಮವು ಈ ಮೂರು ಅಂಗಗಳು ಮಾಡುವ ತಪ್ಪುಗಳನ್ನು ಗಮನಕ್ಕೆ ತಂದು ಸರಿಪಡಿಸುವ ಕಾರ್ಯಕ್ಕೆ ಸಹಕರಿಸುತ್ತದೆ" ಎಂದರು.
"ಜನರ ಜೀವನವನ್ನು ಸುಧಾರಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಸರ್ಕಾರದ ಅಂಗಗಳ ಕಾರ್ಯದಲ್ಲಿ ಲೋಪವಾದರೆ ಅದನ್ನು ಸರಿಮಾಡುವ ಕರ್ತವ್ಯ ಲೋಕಾಯುಕ್ತದ ಮೇಲಿದೆ. ಎಲ್ಲೆಲ್ಲಿ ಕಾರ್ಯಾಂಗ, ಶಾಸಕಾಂಗ ತಪ್ಪು ದಾರಿ ಹಿಡಿದು ಕಾನೂನು ಉಲ್ಲಂಘನೆ ಮಾಡಿದರೆ, ಕರ್ತವ್ಯ ಲೋಪ ಎಸಗಿದರೆ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತದೆ. ಲೋಕಾಯುಕ್ತ ಸಂಸ್ಥೆ ಕರ್ತವ್ಯ ಲೋಪ ಪರಿಶೀಲಿಸಿ ಕರ್ತವ್ಯ ಲೋಪ ಎಸಗಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುತ್ತದೆ" ಎಂದು ತಿಳಿಸಿದರು.
"ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ನಮ್ಮ ವ್ಯಾಪ್ತಿಗೆ ಬಂದರೆ ದೂರನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿ ಸಮಸ್ಯೆ ಪರಿಹರಿಸಲಾಗುವುದು. ನಮ್ಮ ವ್ಯಾಪ್ತಿ ಮೀರಿದ ದೂರು ಆದರೆ ಮಾಹಿತಿ ನೀಡಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಮಾರ್ಗದರ್ಶನ ನೀಡಲಾಗುವುದು. ಅಧಿಕಾರಿಗಳು ಆತ್ಮ ಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಗೆ ತಲುಪಬೇಕಾದ ಸವಲತ್ತುಗಳನ್ನು ನ್ಯಾಯಯುತವಾಗಿ ಸಕಾಲದಲ್ಲಿ ತಲುಪಿಸಬೇಕು" ಎಂದು ಹೇಳಿದರು.
"ಲೋಕಾಯುಕ್ತಕ್ಕೆ ದೂರನ್ನು ನೀಡಬೇಕು ಎಂದೇ ಇಲ್ಲಾ, ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು. ಅನಾವಶ್ಯಕವಾಗಿ ಸುಳ್ಳು ದೂರುಗಳನ್ನು ಸಲ್ಲಿಸಿದರೆ ಸುಳ್ಳು ದೂರು ಸಲ್ಲಿಸುವವರನ್ನು 6 ತಿಂಗಳು ಜೈಲಿಗೆ ಕಳುಹಿಸುವ ಅಧಿಕಾರ ಲೋಕಾಯುಕ್ತ ಸಂಸ್ಥೆಗೆ ಇದೆ" ಎಂದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ದೂರು ಅಹವಾಲುಗಳನ್ನು ಸ್ವೀಕರಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಲೋಕಾಯುಕ್ತ ಉಪ ನಿಬಂಧಕರಾದ ಚೆನ್ನಕೇಶವ ರೆಡ್ಡಿ, ಅಪರ ನಿಬಂಧಕರಾದ ಶಿವಕುಮಾರ್ ಬಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿನೇಶ್, ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್.ಪಿ.ಸುರೇಶ್ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಕೆ.ಎಂ ಗಾಯಿತ್ರಿ, ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ: Teacher Pay Scale: ತರಬೇತಿ ರಹಿತ ಶಿಕ್ಷಕರ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ