ಮೈಸೂರು: ರೈತರ ಪ್ರಣಾಳಿಕೆಯನ್ನು ಚುನಾವಣೆಯಲ್ಲಿ ಬಹಿರಂಗವಾಗಿ ಒಪ್ಪುವ ಪಕ್ಷಗಳಿಗೆ ಬೆಂಬಲ ನೀಡಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು. ನಗರದ ಗನ್‌ಹೌಸ್ ಬಳಿ ಇರುವ ವಿಶ್ವಮಾನವ ಉದ್ಯಾನವನದಲ್ಲಿ ನಡೆದ ಸಭೆಯಲ್ಲಿ ರೈತರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ, ಎಂಎಲ್ಎಗಳು, ಮಂತ್ರಿಗಳಿಗೆ ಎಲ್ಲ ವರ್ಗದವರಿಗೂ ಪ್ರತಿ ತಿಂಗಳು ಕನಿಷ್ಠ ಆದಾಯ ಬರುತ್ತದೆ. ಆದರೆ ರೈತರಿಗೆ ಈ ರೀತಿ ಆದಾಯ ಬರುವುದಿಲ್ಲ. ರೈತರಿಗೂ ಕನಿಷ್ಠ ಆದಾಯ ಖಾತರಿ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರಾಣಿಗಳ ಹಾವಳಿಯಿಂದ ರೈತನ ಬದುಕು ಹಾಳಾಗುತ್ತಿದೆ. ಹಾಗಾಗಿ ಹಗಲು ವೇಳೆಯಲ್ಲಿ ಕೃಷಿ ಪಂಪ್ಶೆಟ್ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡುವ ಭರವಸೆ ಬೇಕು. ದೇಶದ ಉದ್ಯಮಿಗಳಿಗೆ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು, ಕೃಷಿ ಸಾಲ ನೀತಿ ಬದಲಾಗಬೇಕು ಎಂದು ಅವರು ಆಗ್ರಹಿಸಿದರು.
ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಕೈ ಬಿಡುವುದಾಗಿ ಭರವಸೆ ನೀಡಬೇಕು: ದೇಶದ 135 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡುವ ರೈತನಿಗೆ ಬಡ್ಡಿ ರಹಿತವಾಗಿ ಕೃಷಿ ಸಾಲವನ್ನು ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀಡುವಂತ ಯೋಜನೆ ಜಾರಿಗೆ ಬರಬೇಕು. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಕೈ ಬಿಡುವ ಬಗ್ಗೆ ಭರವಸೆ ನೀಡಬೇಕು, ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ಜಾರಿ, ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿ ಮಾಡಬೇಕು, ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಅನ್ವಯ ಮಾಡಬೇಕು. ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಭೂಸ್ವಾದಿನ ಪ್ರಕ್ರಿಯೆ ನಿಲ್ಲಿಸಬೇಕು, ಅಗತ್ಯ ಸಂದರ್ಭಗಳಲ್ಲಿ ರೈತರ ಅನುಮತಿ ಪಡೆಯಬೇಕು. ಆಂತಹ ರೈತರಿಗೆ ಜೀವನ ಭದ್ರತೆ ರೂಪಿಸಬೇಕು. ಕಬ್ಬು ಕಟಾವು, ಸಾಗಾಣಿಕೆ ದುಬಾರಿ ವೆಚ್ಚ, ಹಾಗೂ ರೈತರ ಸುಲಿಗೆ ತಪ್ಪಿಸಲು ಕಬ್ಬಿನ ಎಫ್ಆರ್ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಪಡಿಸಬೇಕು. ರೈತರು ಆಲೆಮನೆಗಳಲ್ಲಿ ಕಬ್ಬಿನಿಂದ ಎಥಾಥೆಲ್ ಉತ್ಪಾದಿಸಿ ಅದನ್ನು ಟ್ರ್ಯಾಕ್ಟರ್ ಮತ್ತಿತರ ಯಂತ್ರಗಳಿಗೆ ಬಳಸಿಕೊಳ್ಳಲು ರೈತರಿಗೆ ಅವಕಾಶ ನೀಡಬೇಕು ಎಂದು ಕುರುಬೂರು ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕುಟುಂಬಸ್ಥರನ್ನು ಸಚಿವ ಸಂಪುಟಕ್ಕೆ ಸೇರಿಸಿಕೂಳ್ಳಬಾರದು: ಗ್ರಾಮೀಣ ಯುವಕರ ವಲಸೆ ತಪ್ಪಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು, ಗ್ರಾಮೀಣ ಭಾಗದಲ್ಲಿ ಕೃಷಿ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಭರವಸೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ರೈತರ ಗಂಡು ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಬೇಕು, ವಿದೇಶಿ ಬಹುರಾಷ್ಟ್ರೀಯ ಎಫ್ಡಿಐ ಬಂಡವಾಳಶಾಹಿ ಕಂಪನಿಗಳ ಚಿಲ್ಲರೆ ಮಾರಾಟ ವ್ಯವಸ್ಥೆಗೆ ಕಡಿವಾಣ ಹಾಕಬೇಕು, ಕೃಷಿ ಕ್ಷೇತ್ರದಲ್ಲಿ ಹೂಡಿಕೆ ನಿಷೇಧ ಹೇರಬೇಕು. ರಾಜ್ಯದ ಕಬ್ಬು ಬೆಳೆಗಾರರಿಗೆ ವಂಚನೆ ಎಸಗುತ್ತಿರುವ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿರುವ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕುಟುಂಬಸ್ಥರನ್ನು ಸಚಿವ ಸಂಪುಟಕ್ಕೆ ಸೇರಿಸಿಕೂಳ್ಳಬಾರದು. ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವ ಭರವಸೆ ಸೇರಿದಂತೆ ಹಲವು ಬೇಡಿಕೆಗೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಕಬ್ಬಿನ ಹೆಚ್ಚುವರಿ ದರ 150 ರೂ ನಿಗದಿ ಆದೇಶಕ್ಕೆ ತಡೆ ಆಜ್ಞೆ ತೆರವುಗೊಳಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಇಬ್ಬಗೆ ನೀತಿ ಅನುಸರಣೆ ಮಾಡದೆ ರೈತರಿಗೆ ಕಾರ್ಖಾನೆಗಳು ಹಣ ಕೂಡಿಸಬೇಕು, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲಿ, ನಿರ್ಲಕ್ಷ್ಯ ಮಾಡಿದರೆ ಬಿಜೆಪಿ ಮಂತ್ರಿಗಳು ಹಳ್ಳಿಗಳಿಗೆ ಬಂದಾಗ ಘೇರಾವ್ ಕಾರ್ಯಕ್ರಮ ಮಾಡಬೇಕಾಗುತ್ತದೆ ಎಂದು ಕುರುಬೂರು ಶಾಂತಕುಮಾರ್ ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ:ಮಾ.17 ರಂದು ಬೆಂ-ಮೈ ಹೈವೇಯಲ್ಲಿ ಶಾಂತಿಯುತ ಪ್ರತಿಭಟನೆ: ಹೆಚ್ ವಿಶ್ವನಾಥ್