ಮೈಸೂರು: ಕುರುಬ ಎಸ್ಟಿ ಹೋರಾಟದ ಹಿಂದೆ ಆರ್ಎಸ್ಎಸ್ ಪಾತ್ರವಿಲ್ಲ ಎಂದು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು.
ಇಂದು ಮೈಸೂರಿನ ಕುರುಬ ಸಮುದಾಯ ಭವನದಲ್ಲಿ ಎಸ್ಟಿ ಹೋರಾಟ ಸಮಿತಿ ಮೈಸೂರು ವಿಭಾಗೀಯ ಮಠದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕುರುಬ ಎಸ್ಟಿ ಹೋರಾಟದ ಹಿಂದೆ ಆರ್ಎಸ್ಎಸ್ ಪಾತ್ರವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಆರ್ಎಸ್ಎಸ್ ಕುರುಬ ಸಮಾಜವನ್ನು ಒಡೆಯುತ್ತಿಲ್ಲ. ಆ ರೀತಿ ತಪ್ಪು ಕಲ್ಪನೆಯನ್ನು ಮೂಡಿಸಲಾಗುತ್ತಿದೆ. ಆರ್ಎಸ್ಎಸ್ ಸಮಾಜವನ್ನು ಎಂದಿಗೂ ಒಡೆಯುವುದಿಲ್ಲ. ಸಮಾಜ ಕೂಡಿಸುವ ಕೆಲಸವನ್ನು ಅದು ಮಾಡುತ್ತದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಸಭೆಯಲ್ಲಿ ತಿರುಗೇಟು ನೀಡಿದರು.
ಕುರುಬ ಎಸ್ಟಿ ಆಗುವವರೆಗೂ ಹೋರಾಟ ಬಿಡುವುದಿಲ್ಲ. ಕೇಂದ್ರದ ನರೇಂದ್ರ ಮೋದಿ, ಅಮಿತ್ ಶಾ ಅವರ ಗಮನಕ್ಕೆ ತರಲು ಸಮಾವೇಶ, ಪಾದಯಾತ್ರೆಗಳನ್ನು ಮಾಡಲಾಗುತ್ತಿದೆ. ಈ ವಿಚಾರವಾಗಿ ಸಂತೋಷ್ ಜೀ ಅವರನ್ನು ಭೇಟಿ ಮಾಡಿ ನಾನು ಮಂತ್ರಿ ಆಗಿರುವುದರಿಂದ ಎಸ್ಟಿ ಹೋರಾಟದಲ್ಲಿ ನ್ಯಾಯ ದೊರಕಿಸಿಕೊಡಲು ಕೊಂಡಿಯಾಗಿ ಕೆಲಸ ಮಾಡುತ್ತೇನೆ ಎಂದರು.
ಕುರುಬ ಎಸ್ಟಿ ಹೋರಾಟ ನೇತೃತ್ವವನ್ನು ಸಮುದಾಯದ ಸ್ವಾಮೀಜಿಯವರು ವಹಿಸಿದ್ದಾರೆ. ಅವರೆಲ್ಲರ ಮಾರ್ಗದರ್ಶನದಲ್ಲಿ ನಾವೆಲ್ಲಾ ಮುಂದುವರೆಯಬೇಕು. ರಾಜಕೀಯವನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಡಬೇಕು. ಈ ಹೋರಾಟದ ಬೃಹತ್ ರ್ಯಾಲಿ ಫೆ. 7ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನರು ಆಗಮಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.