ಮೈಸೂರು: ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ರಾಜ್ಯದ ಜನತೆ ನೊಂದಿದ್ದಾರೆ. ರಾಜ್ಯದ ಜನರು ಅಭಿವೃದ್ಧಿಯನ್ನು ಬಯಸಿದ್ದಾರೆ. ಅದಕ್ಕಾಗಿ ಬದಲಾವಣೆ ಬಯಸಿ ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಂಜನಗೂಡಿನಲ್ಲಿ ಸೋಮವಾರ ರಾತ್ರಿ ನಡೆದ 'ಪ್ರಜಾಧ್ವನಿ ಯಾತ್ರೆ ಸಮಾವೇಶ'ದಲ್ಲಿ ಮಾತನಾಡಿದ ಅವರು, ಬದಲಾವಣೆಗೆ ನಂಜನಗೂಡಿನ ಜನ ಸಿದ್ಧರಾಗಿದ್ದಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಬಿಜೆಪಿ ತನ್ನ ಪ್ರಾಣಾಳಿಕೆಯಲ್ಲಿ ನೀಡಿದ್ದ ಪೊಳ್ಳು ಭರವಸೆಗಳಿಂದ ಜನ ಬೇಸತ್ತಿದ್ದಾರೆ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ ಪ್ರಧಾನಿಯವರ ಮಾತು ಹುಸಿಯಾಗಿದೆ. ಇನ್ನು ಕೆಲವೇ ದಿನಗಳು ಮಾತ್ರ ಅಧಿಕಾರದಲ್ಲಿರುವ ನಿಮ್ಮ ಶಾಸಕರಲ್ಲಿ, ರಾಜ್ಯದ ಮುಖ್ಯಮಂತ್ರಿಗಳಲ್ಲಿ ಈ ಬಗ್ಗೆ ಪ್ರಶ್ನಿಸಿ ಎಂದು ಹೇಳಿದರು.
ಮತದಾನದ ಹಾರ ಹಾಕಿ: ಬರಿ ಹೂವಿನ ಹಾರ ಹಾಕಬೇಡಿ. ಬದಲಾಗಿ ಮತದಾನದ ಹಾರ ಹಾಕಿ. ಬದಲಾವಣೆಗೆ ಶಕ್ತಿ ನೀಡಿ. ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ. ನಾನು ಸಿದ್ದರಾಮಯ್ಯ ನಿಮ್ಮ ಋಣವನ್ನು ತೀರಿಸುತ್ತೇವೆ. ಮಲ್ಲಿಕಾರ್ಜುನ್ ಖರ್ಗೆ ಅವರು ಕಾಂಗ್ರೆಸ್ನ ಅಧ್ಯಕ್ಷರಾಗಿದ್ದಾರೆ. ಅವರ ಕೈಯನ್ನು ಬಲಪಡಿಸಬೇಕಿದೆ. ಈ ರಾಷ್ಟ್ರಕ್ಕೆ ಒಂದು ಸಂದೇಶವನ್ನು ಕೊಡಬೇಕು. ಕಾಂಗ್ರೆಸ್ನ ಇತಿಹಾಸ ಈ ದೇಶದ ಇತಿಹಾಸ ಎಂದು ಡಿಕೆಶಿ ಹೇಳಿದರು.
ಸಭೆಯಲ್ಲಿ ನೆರೆದಿದ್ದ ಜನರು ಅಭ್ಯರ್ಥಿಯನ್ನು ಇಲ್ಲೇ ಘೋಷಿಸಿ ಎಂದು ಒತ್ತಾಯಿಸಿದಾಗ ಗುಟ್ಟು ಬಿಡದ ಡಿ.ಕೆ ಶಿವಕುಮಾರ್ ಇಲ್ಲಿ ನಾನೇ ಅಭ್ಯರ್ಥಿ. ಸಿದ್ದರಾಮಯ್ಯನವರೇ ಅಭ್ಯರ್ಥಿ ಎಂಬ ಮನೋಭಾವ ಇಟ್ಟುಕೊಂಡು ನಿಮ್ಮ ಮತವನ್ನು ಕಾಂಗ್ರೆಸ್‌ಗೆ ನೀಡಿ ಎಂದು ಮನವಿ ಮಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಮಾತನಾಡಿ, " ನಮ್ಮ ನಾಯಕರಾದ ಡಿಕೆ ಶಿವಕುಮಾರ್ ಅವರು 7 ಬಾರಿ ಶಾಸಕರಾಗಿ, ಮಂತ್ರಿಗಳಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಇಂಧನದ ಕೊರತೆಯಿತ್ತು. ಸುಮಾರು 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಇದ್ದದ್ದು, ಅವರ ಅವಧಿಯಲ್ಲಿ ಇನ್ನು 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಒಟ್ಟು ರಾಜ್ಯದಲ್ಲಿ 20 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ಕರ್ನಾಟದಲ್ಲಿ ವಿದ್ಯುತ್ ಕೊರತೆಯಿಲ್ಲ. ಅದಕ್ಕೆ ಕಾರಣ ನಮ್ಮ ಸರ್ಕಾರದ ಇದ್ದ ಸಂದರ್ಭದಲ್ಲಿ ಅವರು ವಹಿಸಿದ ನಿರ್ವಹಣೆ. ಜತೆಗೆ ಅವರು ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುವ ಕರೆ ಕೊಟ್ಟು ಕಾಂಗ್ರೆಸ್ ಪಕ್ಷದ ಬೆಳವಣಿಗಗೆ ಶ್ರಮ ವಹಿಸಿದ್ದಾರೆ" ಎಂದರು.
ಹಾಸ್ಯ ನಟ ಸಾಧು ಕೋಕಿಲ ಮಾತನಾಡಿ, ಒಂದು ಸಿಂಹ ಒಂದು ಹುಲಿ. ಸಿದ್ದರಾಮಯ್ಯ ಹುಲಿ. ಡಿ.ಕೆ ಶಿವಕುಮಾರ್ ಸಿಂಹ. ಇವೆರಡೂ ಇರಬೇಕಾದರೆ ನಾಮಗ್ಯಾಕೆ ಚಿಂತೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಇದನ್ನೂ ಓದಿ: 3 ಪರ್ಸೆಂಟ್ ಮೀಸಲಾತಿ ಪಡೆಯಲು ಒಕ್ಕಲಿಗರ‍್ಯಾರು ಭಿಕ್ಷುಕರಲ್ಲ: ಡಿ.ಕೆ ಶಿವಕುಮಾರ್