ಮೈಸೂರು : ನಂಜನಗೂಡಿನ ಪ್ರಸಿದ್ಧ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಕಪಿಲಾ ನದಿಯಲ್ಲಿ ಯುವ ಬ್ರಿಗೇಡ್ ವತಿಯಿಂದ ಶುಕ್ರವಾರ ರಾತ್ರಿ ಕಪಿಲಾ ಆರತಿ ಮತ್ತು ಲಕ್ಷ ದೀಪೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಲ್ಲನಮೂಲೆ ಮಠದ ಶ್ರೀ ಗುರುಚೆನ್ನಬಸವ ಸ್ವಾಮೀಜಿ, ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಮಹಾಂತ ಸ್ವಾಮೀಜಿ, ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಹರ್ಷ ಶಿವಮೊಗ್ಗ ಅವರು ಹದಿನಾರು ಕಾಲು ಮಂಟಪದಲ್ಲಿ ಶಿವಲಿಂಗಕ್ಕೆ ಮಹಾಮಂಗಳಾರತಿ ಮತ್ತು ಕಪಿಲಾ ನದಿಗೆ ಆರತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಹರ್ಷ ಶಿವಮೊಗ್ಗ ಮಾತನಾಡಿ, "ಕಳೆದ ಹತ್ತು ವರ್ಷಗಳಿಂದ ನದಿಗಳಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಯುವ ಬ್ರಿಗೇಡ್ ವತಿಯಿಂದ ದೇವಾಲಯಗಳ ಜೀರ್ಣೋದ್ಧಾರ, ನದಿಗಳ ಸ್ವಚ್ಛತೆ ನಡೆಸುವ ಮೂಲಕ ಸಾಮರಸ್ಯದ ಜ್ಯೋತಿ ಬೆಳಗಿಸಲಾಗುತ್ತಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ : ಚಿಕ್ಕಜಾತ್ರಾ ಮಹೋತ್ಸವ : ವಿಜೃಂಭಣೆಯಿಂದ ಜರುಗಿದ ಶ್ರೀ ನಂಜುಂಡೇಶ್ವರ ಸ್ವಾಮಿ ತೆಪ್ಪೋತ್ಸವ
ಈ ವೇಳೆ ಕಪಿಲಾ ನದಿಗೆ ನಾನಾ ಬಗೆಯ ಪೂಜೆ ಮಾಡಿ ಆರತಿ ಬೆಳಗಲಾಯಿತು. ನದಿಯ ಸೋಪಾನ ಕಟ್ಟೆಯ ಮೇಲೆ ಭಕ್ತರು ದೀಪಗಳನ್ನು ಬೆಳಗಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಸಂಚಾಲಕ ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.