ಮೈಸೂರು: ಮಧ್ಯಪ್ರದೇಶದಲ್ಲಿನ ಮುಖ್ಯಮಂತ್ರಿ ಕಮಲನಾಥ್ ದುರಹಂಕಾರವೇ, ಆ ಸರ್ಕಾರದ ಪತನವಾಗಲು ಕಾರಣ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಇಂದು ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ನಂತರ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೆ ನಡೆದ ಬೆಳವಣಿಗೆಯ ರೀತಿಯಲ್ಲೆ ಮಧ್ಯಪ್ರದೇಶದಲ್ಲೂ ಸಹ ಸರ್ಕಾರ ಪತನದ ಅಂಚಿನಲ್ಲಿ ಇದೆ. ಇಲ್ಲಿ ಸಮ್ಮಿಶ್ರ ಸರ್ಕಾರದ ನಾಯಕತ್ವ ಹಾಗೂ ಅವರ ದುರಹಂಕಾರದ ಫಲವೇ ಸಮ್ಮಿಶ್ರ ಸರ್ಕಾರ ಪತನ ಆಗಲು ಕಾರಣವಾಯಿತು. ಅದೇ ರೀತಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರ ದುರಹಂಕಾರವೆ ಅಲ್ಲಿನ ಸರ್ಕಾರ ಪತನವಾಗಲು ಕಾರಣ ಎಂದಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಜನತಂತ್ರದ ವ್ಯವಸ್ಥೆಯಲ್ಲಿ ಒಬ್ಬ ಪ್ರಧಾನಮಂತ್ರಿ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುವುದು ಸಮಂಜಸವಲ್ಲ, ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ವ್ಯಕ್ತಿ ಈ ರೀತಿ ತಲೆ ಕೆಟ್ಟವರಂತೆ ಮಾತನಾಡಬಾರದು. ರಮೇಶ್ ಕುಮಾರ್ ಮೇಲೆ ಎಫ್.ಐ.ಆರ್ ಹಾಕಿ ಒದ್ದು ಒಳಗೆ ಹಾಕಬೇಕು ಎಂದು ಕಿಡಿಕಾರಿದ್ದಾರೆ.