ಮೈಸೂರು : ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಯೋಜನೆ ಕೇವಲ ಕಾಂಗ್ರೆಸ್ನವರಿಗೆ ಮಾತ್ರವಲ್ಲ, ಬಿಜೆಪಿ, ಜೆಡಿಎಸ್ ಸೇರಿ ಎಲ್ಲರಿಗೂ ಬೇಕು ಎಂದು ಪಾದಯಾತ್ರೆಯನ್ನ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಪಕ್ಷತೀತವಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿ, ಎಲ್ಲಾ ಪಕ್ಷಗಳಿಗೂ ಆಹ್ವಾನ ನೀಡಿದ್ದಾರೆ. ತ್ವರಿತವಾಗಿ ಮೇಕೆದಾಟು ಯೋಜನೆ ಜಾರಿಗೆ ತರಲು ಒತ್ತಡ ಹೇರಲು ಪಾದಯಾತ್ರೆ ಅವಶ್ಯಕತೆ ಇದೆ ಎನ್ನುವ ಮೂಲಕ ಕಾಂಗ್ರೆಸ್ ಪಾದಯಾತ್ರೆಗೆ ಜೈ ಎಂದರು.
ರಾಜ್ಯದ ಎಲ್ಲರಿಗೂ ಕುಡಿಯುವ ನೀರು ಅತ್ಯಾವಶ್ಯಕವಾಗಿಬೇಕು. ಹಾಗಾಗಿ ಯೋಜನೆ ಅನುಷ್ಠಾನಕ್ಕೆ ಒತ್ತಡ ಹೇರುಲು ಪಾದಯಾತ್ರೆ ಅಗತ್ಯ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಸಮಯವಿದೆ, ಇದರಲ್ಲಿ ಯಾವ ರಾಜಕೀಯ ಮಾಡೋಕೆ ಆಗುತ್ತೆ ಎಂದ ಅವರು, ಕಾಂಗ್ರೆಸ್ ನವರು ಒಟ್ಟಿಗೆ ಸೇರಿ ಪಾದಯಾತ್ರೆಯನ್ನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಕೂಡ ಪಾದಯಾತ್ರೆಯನ್ನು ತಡೆದಿಲ್ಲ. ಹಾಗಾಗಿ ಮೇಕೆದಾಟು ಯೋಜನೆ ಬೇಗ ಜಾರಿಯಾಗಬೇಕು ಎನ್ನುವುದು ನಮ್ಮ ಆಶಯ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಗಾಗಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಮತ್ತಷ್ಟು ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದರು.
ಜಿಲ್ಲಾಧಿಕಾರಿಗಳು, ತಾಲೂಕು ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳತ್ತಿದ್ದಾರೆ. ಕಳೆದ ಬಾರಿಯಂತೆ ಕೋವಿಡ್ ಸೆಂಟರ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ ಬೆಡ್ ಗಳ ಕೊರತೆ ಉಂಟಾಗದಂತೆ ಎಚ್ಚರ ವಹಿಸಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಮರ್ಥವಾಗಿ ಕೋವಿಡ್ ನಿರ್ವಹಿಸಲಿದ್ದೇವೆ ಎಂದು ಹೇಳಿದರು.