ಮೈಸೂರು : ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮಾ ಪತ್ರಿಕೆಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಕಷ್ಟ ನಷ್ಟಗಳ ನಡುವೆಯೂ ಇಂದಿಗೂ ಸಹ ಮುದ್ರಣವಾಗುತ್ತಿರುವ ಪ್ರಪಂಚದ ಏಕೈಕ ಸಂಸ್ಕೃತ ಪತ್ರಿಕೆ ನಡೆಸುತ್ತಿರುವ ಪದ್ಮಶ್ರೀ ಪಡೆದ ಕೆ.ಎಸ್.ಜಯಲಕ್ಷ್ಮಿ ಅವರು ಈಟಿವಿ ಭಾರತ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಂಸ್ಕೃತ ಭಾಷೆಯನ್ನು ದೇವಭಾಷೆ ಎಂದು ಕರೆಯುತ್ತಾರೆ. ಇಂತಹ ಭಾಷೆ ಕೇವಲ ವಿದ್ವಾಂಸರುಗಳಿಗೆ, ಪಂಡಿತರಿಗೆ ಮೀಸಲು ಎಂಬ ಕಾಲಘಟ್ಟದಲ್ಲಿ ಸುಧರ್ಮಾ ಸಂಸ್ಕೃತ ದಿನಪತ್ರಿಕೆಯನ್ನು ಕಳೆದ 52 ವರ್ಷಗಳಿಂದಲೂ ಮೈಸೂರಿನಿಂದ ಪ್ರಕಟಿಸಲಾಗುತ್ತಿದೆ. ಇದು ಪ್ರಪಂಚದ ಏಕೈಕ ಸಂಸ್ಕೃತ ದಿನಪತ್ರಿಕೆ ಎಂಬ ಖ್ಯಾತಿ ಪಡೆದಿದೆ.
ಕಷ್ಟ ನಷ್ಟಗಳ ನಡುವೆಯೂ ಸಂಸ್ಕ್ರತದ ಉಳಿವಿಗಾಗಿ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದ ಕೆ.ವಿ.ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಕೆ.ಎಸ್.ಜಯಲಕ್ಷ್ಮಿ ಅವರಿಗೆ ದೇಶದ ಅತ್ಯುನ್ನತ ನಾಲ್ಕನೇ ಪ್ರಶಸ್ತಿ ಪದ್ಮಶ್ರೀಯನ್ನು 2020ರಲ್ಲಿ ನೀಡಲಾಯಿತು.
ಆದರೆ, ಕೋವಿಡ್ ಹಿನ್ನೆಲೆ ಪ್ರಶಸ್ತಿಯನ್ನು ಈ ವರ್ಷ ನೀಡಲಾಯಿತು. ಆದರೆ, ಪದ್ಮಶ್ರೀ ಪ್ರಶಸ್ತಿ ಪಡೆದ ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ ಕೆಲಸ ಮಾಡುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಪತ್ನಿ ಕೆ.ಎಸ್.ಜಯಲಕ್ಷ್ಮಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.
1970ರಲ್ಲಿ ವರದರಾಜ ಅಯ್ಯಂಗಾರ್ ಸ್ಥಾಪಿಸಿದ ಸುಧರ್ಮಾ ಸಂಸ್ಕೃತ ದಿನಪತ್ರಿಕೆಯನ್ನು ಕಳೆದ 30 ವರ್ಷಗಳಿಂದಲೂ ಅವರ ಮಗ ಸಂಪತ್ ಕುಮಾರ್ ತಂದೆಗೆ ಕೊಟ್ಟ ಮಾತಿನಂತೆ ಸಂಸ್ಕೃತ ದಿನಪತ್ರಿಕೆಯನ್ನು ನಡೆಸಿಕೊಂಡು ಬಂದು ಪದ್ಮಶ್ರೀ ಪ್ರಶಸ್ತಿ ಪ್ರಕಟವಾದ ನಂತರ ಪ್ರಾಣಬಿಟ್ಟರು. ಅದಕ್ಕಾಗಿ ನಾನೂ ದೆಹಲಿಗೆ ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿದೆ.
ಸಂಸ್ಕೃತ ಭಾಷೆಯ ಉಳಿವಿಗಾಗಿ ಇದು ದೊರೆತಿದೆ. ಇದರಿಂದ ನಮಗೆ ಜವಾಬ್ದಾರಿ ಹೆಚ್ಚಿದೆ. ಸಾಮಾನ್ಯರಲ್ಲಿ ಸಾಮಾನ್ಯರಾದ ನಮಗೆ ಈ ಪ್ರಶಸ್ತಿ ದೊರೆತಿದ್ದು ನಿಜಕ್ಕೂ ಆಶ್ಚರ್ಯದ ಸಂಗತಿ. ಪ್ರಶಸ್ತಿ ಬಂದ ನಂತರ ಸುಧರ್ಮಾ ಪತ್ರಿಕೆಗೆ ಪ್ರಪಂಚದಾದ್ಯಂತ ಪ್ರಚಾರ ಸಿಕ್ಕಿದ್ದು, ನಮಗೆ ಜವಾಬ್ದಾರಿ ಹೆಚ್ಚಾಗಿದೆ. ಆದರೆ, ಪೂರೈಕೆ ಮಾಡಲು ಆರ್ಥಿಕ ಸಂಕಷ್ಟ ಇದೆ ಅಂತಾರೆ ಕೆ.ಎಸ್. ಜಯಲಕ್ಷ್ಮಿ.
ಕೋವಿಡ್ ಸಮಯದಲ್ಲೂ ಪತ್ರಿಕೆ ನಿಲ್ಲಲಿಲ್ಲ. ನಾಲ್ಕು ಪುಟದ ಪತ್ರಿಕೆ ಪ್ರಕಟ ಮಾಡಲು ಆಗಲಿಲ್ಲ. ಕೊನೆಗೆ ಆನ್‌ಲೈನ್ ಮೂಲಕವು ಸಹ ಲಕ್ಷಾಂತರ ಓದುಗರನ್ನು ಹೊಂದಿದೆ. ಈಗ ದಿನನಿತ್ಯ ಪ್ರಕಟವಾಗುತ್ತಿದೆ. ದೇವಭಾಷೆಯಾದ ಸಂಸ್ಕೃತ ಭಾಷೆ ಉಳಿಯಬೇಕಿದೆ ಎಂಬುದು ನಮ್ಮೆಲ್ಲರ ಆಸೆ. ಆದರೆ, ಪ್ರಶಸ್ತಿ ಬಂದ ನಂತರ ಸಂಪಾದಕರಾದ ಕೆ.ವಿ.ಸಂಪತ್ ಕುಮಾರ್ ನಿಧನ ನಮಗೆ ಶೂನ್ಯತ್ವ ತಂದಿದೆ ಎಂದರು.