ಮೈಸೂರು: ನಗರದ ಹಂಚ್ಯ-ಸಾತಗಳ್ಳಿ ಬಳಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು(ಮೂಡ) 20 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಅಗತ್ಯ ದಾಖಲಾತಿಗಳನ್ನು ನೀಡಿದೆ.
ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಹಂಚ್ಯಾ - ಸಾತಗಳ್ಳಿಯ ಬಿ-ವಲಯದ ಬಳಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲು ಸಿದ್ಧತಾ ಕಾರ್ಯ ಆರಂಭವಾಗಿದೆ. ನಗರದ ಹೊರವಲಯದ ಬಳಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ್ದ 84, 85, 104, 105, 106, 102,109 ಸರ್ವೇ ನಂಬರ್ ವ್ಯಾಪ್ತಿಯ 20 ಎಕರೆ 8 ಗುಂಟೆ ಜಾಗದಲ್ಲಿ ಕ್ರೀಡಾಂಗಣದ ನಿರ್ಮಾಣಕ್ಕೆ ಮೂಡ 30 ವರ್ಷಕ್ಕೆ 18 ಕೋಟಿ ರೂಪಾಯಿ ಪಡೆಯಲಿದ್ದು, ಜಾಗ ನೀಡಲು ಒಪ್ಪಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದಕ್ಕೆ ಸಮ್ಮತಿ ಸೂಚಿಸಿದ್ದು, ಕ್ಯಾಬಿನೆಟ್ನಲ್ಲಿ ಅನುಮತಿ ಸಿಕ್ಕರೆ ಶೀಘ್ರವೇ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ಸಿಗಲಿದೆ.
ಈ ಬಗ್ಗೆ ಮೂಡ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿ, 'ಸಾತಗಳ್ಳಿ ಬಿ-ವಲಯದಲ್ಲಿರುವ 20 ಎಕರೆ ಜಾಗವನ್ನು ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ 30 ವರ್ಷ ಗುತ್ತಿಗೆ ನೀಡಲು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಸಿದ್ಧವಿದೆ. ಇದಕ್ಕಾಗಿ 18 ಕೋಟಿ ರೂಪಾಯಿ ಪಡೆಯಲಿದೆ. ಈ ಬಗ್ಗೆ ನಿನ್ನೆ ಅಧಿಕಾರಿಗಳ ಜೊತೆ ಹೋಗಿ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದ್ದೇನೆ' ಎಂದು ತಿಳಿಸಿದರು.
ಇದನ್ನೂ ಓದಿ: ಮೈಸೂರು: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮುಡಾ ಜೊತೆ ಕೆಎಸ್ಸಿಎ ಚರ್ಚೆ
ಮೂಡದ ಆಯುಕ್ತ ದಿನೇಶ್ ಕುಮಾರ್ ಹೇಳಿದ್ದೇನು?: 2016 ರಲ್ಲಿ ಈ ಜಾಗವನ್ನು ಕ್ರೀಡಾಂಗಣಕ್ಕೆ ಮೀಸಲಿಡಲಾಗಿತ್ತು. ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ 30 ವರ್ಷ ಗುತ್ತಿಗೆ ನೀಡಲು ಸರ್ಕಾರಕ್ಕೆ ಅಗತ್ಯ ದಾಖಲೆ ನೀಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: 'ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಬಗ್ಗೆ ಅಧಿಕಾರಿಗಳ ಜೊತೆ ಶೀಘ್ರ ಚರ್ಚೆ'
ಐಪಿಎಲ್ ಸೇರಿದಂತೆ ಪ್ರಮುಖ ಪಂದ್ಯಗಳ ಆಯೋಜನೆ: ಸಾಂಸ್ಕೃತಿಕ ನಗರಿ ಮೈಸೂರು ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಅವಶ್ಯಕತೆ ಇದೆ. ಕ್ರೀಡಾಂಗಣ ನಿರ್ಮಾಣಗೊಂಡರೆ ರಣಜಿ, ಐಪಿಎಲ್ ಸೇರಿದಂತೆ ಪ್ರಮುಖ ಪಂದ್ಯಗಳನ್ನು ಮುಂದಿನ ದಿನಗಳಲ್ಲಿ ನಡೆಸಬಹುದು ಎಂದು ಮುಡಾ ಅಧಿಕಾರಿಗಳ ಜೊತೆ ಚರ್ಚಿಸಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತೀರ್ಮಾನ ತೆಗೆದುಕೊಂಡಿದೆ.
ಇದನ್ನೂ ಓದಿ: ಕ್ರಿಕೆಟ್ ಸ್ಟೇಡಿಯಂಗಾಗಿ ನಾಯಕರ ಮುಸುಕಿನ ಗುದ್ದಾಟ.. ಸ್ಥಳ ನಿಗದಿಗಾಗಿ ದಶಕಗಳ ಕಿತ್ತಾಟ