ಮೈಸೂರು: ಹೆಚ್ ಡಿ ಕೋಟೆ ತಾಲೂಕಿನ ಕೇರಳ ಗಡಿಭಾಗದ ಪ್ರದೇಶಗಳಲ್ಲಿ ರಾಜಾರೋಷವಾಗಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಳೂರಿನ ಕೃಷಿ ಭೂಮಿಯಲ್ಲಿ ಮಾದಕ ದ್ರವ್ಯ ಸೇವಿಸುತ್ತಿರುವ ಕೆಲವರ ಫೋಟೋ ಮತ್ತು ವಿಡಿಯೋಗಳು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು, ಸ್ಥಳೀಯ ಪೊಲೀಸರಲ್ಲಿ ಆಗ್ರಹ ಮಾಡಿದ್ದಾರೆ.
ಗೋಳೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಗಡಿ ಭಾಗದವರೇ ಗಿರಾಕಿಗಳಾಗಿದ್ದು, ಗೂಡಂಗಡಿಗಳಲ್ಲಿ ಮಾದಕ ವಸ್ತುಗಳು ದೊರೆಯುತ್ತವೆ. ಈ ಬಗ್ಗೆ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
![ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್](https://etvbharatimages.akamaized.net/etvbharat/prod-images/10-08-2023/19231643_mys.jpg)
ಮಾದಕ ದ್ರವ್ಯ ಸೇವಿಸುತ್ತಿರುವ ಕೆಲವರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಬಗ್ಗೆ ಕೇರಳದಲ್ಲಿ ದೂರು ದಾಖಲಾಗಿದೆ. ಸಂಬಂಧಪಟ್ಟವರನ್ನು ಬಂಧಿಸಲಾಗಿದೆ. ನದಿ ದಾಟಿ ಬಂದು ಕೆಲವರು ಈ ರೀತಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಸ್ಥಳ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ವ್ಯಾಪ್ತಿಗೆ ಬರಲಿದ್ದು, ಈ ಘಟನೆ ಬಗ್ಗೆ ಕೇರಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸರಗೂರು ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖತರ್ನಾಕ್ ಜಾಲ ಭೇದಿಸಿದ ಸಿಸಿಬಿ ಪೊಲೀಸರು: 12 ಕೋಟಿ ಮೌಲ್ಯದ ಗಾಂಜಾ ಜಪ್ತಿ
ಗಾಂಜಾ ಜಪ್ತಿ: ಸಿನಿಮೀಯ ರೀತಿಯಲ್ಲಿ ಗೂಡ್ಸ್ ವಾಹನವನ್ನೇ ಕಂಪಾರ್ಟ್ಮೆಂಟ್ ಮಾಡಿಕೊಂಡು ಆಂಧ್ರಪ್ರದೇಶ - ಒಡಿಶಾ ಗಡಿ ಭಾಗಗಳಲ್ಲಿ ಸ್ಥಳೀಯರಿಂದ ಗಾಂಜಾ ಖರೀದಿಸಿ, ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದ ಮೂವರು ಖದೀಮರನ್ನು ನಗರದ ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಲ್ಲದೇ ಅವರಿಂದ ಬರೋಬ್ಬರಿ 12 ಕೋಟಿ ಮೌಲ್ಯದ 1500 ಕೆಜಿ ಗಾಂಜಾವನ್ನು ಸಹ ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಸಲ್ಮಾನ್, ಆತನಿಗೆ ಗಾಂಜಾ ಪೂರೈಸುತ್ತಿದ್ದ ರಾಜಸ್ಥಾನ ಮೂಲದ ಚಂದ್ರಭಾನ್ ಬಿಷ್ಣೋಯಿ ಹಾಗೂ ಆಂಧ್ರ ಮೂಲದ ಲಕ್ಷ್ಮಿ ಮೋಹನ್ ದಾಸ್ ಬಂಧಿತ ಆರೋಪಿಗಳಾಗಿದ್ದು, ಈ ಮೂವರು ಆರೋಪಿಗಳ ಸಹಿತ ಕೋಟ್ಯಂತರ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.
ಪುಷ್ಪ ಚಿತ್ರದ ಮಾದರಿಯಲ್ಲಿ ಕೃತ್ಯ ಎಸಗುತ್ತಿದ್ದ ಆರೋಪಿಗಳು ರಾಜಸ್ಥಾನ ನೋಂದಣಿಯ ಗೂಡ್ಸ್ ವಾಹನ ಹೊಂದಿದ್ದು, ಗಾಂಜಾ ಸಾಗಿಸಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರು. ವಾಹನಕ್ಕೆ ವಿವಿಧ ನಕಲಿ ನಂಬರ್ ಪ್ಲೇಟ್ ಬಳಸುತ್ತಿದ್ದರು. ಅಲ್ಲದೇ ಸಿನಿಮಾ ಮಾದರಿಯಲ್ಲಿ ವಾಹನದ ಗೂಡ್ಸ್ ಕಂಪಾರ್ಟ್ಮೆಂಟ್ನ ಕೆಳಗಡೆ ಮತ್ತೊಂದು ಸೀಕ್ರೆಟ್ ಕಂಪಾರ್ಟ್ಮೆಂಟ್ ಮಾಡಿಸಿಕೊಂಡಿದ್ದರು. ಗಾಂಜಾ ಸಾಗಿಸುವಾಗ ಮೇಲಿನ ಗೂಡ್ಸ್ ಕಂಪಾರ್ಟ್ಮೆಂಟ್ ಭಾಗದಲ್ಲಿ ಪ್ಲಿಪ್ ಕಾರ್ಟ್ ಪಾರ್ಸೆಲ್ ಬಾಕ್ಸ್ ಗಳಲ್ಲಿಯೂ ಗಾಂಜಾ ಇರಿಸಿ ಸಾಗಿಸುತ್ತಿದ್ದುದು ಸಹ ತನಿಖೆ ವೇಳೆ ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಈ ಪ್ರಕರಣದ ಬಗ್ಗೆ ಇತ್ತೀಚೆಗೆ ಮಾಧ್ಯಮಗೋಷ್ಟಿ ನಡೆಸಿ ಇಂಚಿಂಚು ಮಾಹಿತಿ ನೀಡಿದ್ದರು.
ಇದನ್ನೂ ಓದಿ: Drugs: ಬೆಂಗಳೂರಿನಲ್ಲಿ 1 ತಿಂಗಳಲ್ಲಿ ₹18 ಕೋಟಿ ಮೌಲ್ಯದ 1,785 ಕೆಜಿ ಡ್ರಗ್ಸ್ ಜಪ್ತಿ: 487 ಆರೋಪಿಗಳು ಸೆರೆ