ಮೈಸೂರು : ತಮ್ಮ ವಿರುದ್ಧದ ಆಧಾರ ರಹಿತ ಹಾಗೂ ಗಾಳಿ ಮಾತುಗಳಿಗೆ ಉತ್ತರ ಕೊಡುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ರೈಲ್ವೆ ಮ್ಯೂಸಿಯಂ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ತಮ್ಮ ವಿರುದ್ಧ ಕೆಪಿಸಿಸಿ ವಕ್ತಾರ ಮಾಡಿರುವ ಅಶ್ಲೀಲ ಸಿಡಿ ವಿಚಾರದ ಬಗ್ಗೆ ಆಧಾರ ರಹಿತ ಮಾತುಗಳಿಗೆ ಉತ್ತರ ಕೊಡುವುದಿಲ್ಲ, ಅದಕ್ಕೆ ಸಾಕ್ಷಿ ಬೇಕು. ಇಂಥ ವಿಚಾರದ ಬಗ್ಗೆ ಮಾತನಾಡದಿರುವುದೇ ಲೇಸು ಎಂದು ನನ್ನನ್ನು 2 ಬಾರಿ ಜನ ಗೆಲ್ಲಿಸಿದ್ದಾರೆ. ಜನರಿಗೆ ಯಾರು ಏನು ಎಂದು ಗೊತ್ತಿದೆ. ಇತರ ವಿಷಯವನ್ನು ಮಾತನಾಡಿ ಸಮಯ ಹಾಳುಮಾಡಿಕೊಳ್ಳುವುದು ಬೇಡ ಎಂದು ಹೇಳಿದರು.
ಡ್ರಗ್ಸ್ ದಂಧೆಯಲ್ಲಿ ಬರಿ ಸ್ಯಾಂಡಲ್ ವುಡ್ ಮಾತ್ರ ನೋಡಬೇಡಿ ಎಲ್ಲಾ ಕಡೆ ಇದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಹಿಂದೆಯೂ ಡ್ರಗ್ಸ್ ಮಾಫಿಯಾ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಚಿತ್ರರಂಗವಲ್ಲದೆ ಎಲ್ಲಾ ಕಡೆ ಡ್ರಗ್ಸ್ ಮಾಫಿಯಾ ಇದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಇದನ್ನು ಸಮಾಜದಿಂದ ಹೋಗಲಾಡಿಸಲು ಪೊಲೀಸರಿಗೆ ಮಾಹಿತಿ ನೀಡೋಣ ಎಂದ ಸಂಸದರು, ಡ್ರಗ್ಸ್ ಇಂದು ಟೆರರಿಸಂ ಭಾಗವಾಗಿದೆ ಎಂದು ಪಂಜಾಬ್ ಅನ್ನು ಉದಾಹರಣೆಯಾಗಿ ನೀಡಿದರು.
ದಸರಾ ಆಚರಣೆ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಅಲ್ಲಿ ಯಾವ ರೀತಿ ದಸರಾ ಆಚರಿಸಬೇಕು, ಉದ್ಘಾಟಕರಾಗಿ ಯಾರನ್ನು ಆರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದರು.