ಮೈಸೂರು: ಅನೈತಿಕ ಸಂಬಂಧದ ಆರೋಪ ಹೊರಿಸಿ ಪತ್ನಿ ಹಾಗೂ ಯುವಕನೊಬ್ಬನನ್ನು ಪತಿ ತನ್ನ ಸಹೋದರನೊಡಗೂಡಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ನಡೆದಿದೆ. ಪತಿ ಹಾಗೂ ಮೈದುನನ ವಿರುದ್ಧ ಕೌಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿಯನ್ನು ಪೊಲೀಸರು ಬಂಧಿಸಿದ್ದು, ಮೈದುನ ಪರಾರಿಯಾಗಿದ್ದಾನೆ.
ಹೆಮ್ಮರಗಾಲದ ಗ್ರಾಮದ ಮಹಿಳೆ ಗಂಡನನ್ನು ತೊರೆದು ಕಳೆದ ಐದು ವರ್ಷದಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದು, ಆಕೆಯ ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳು ಪತಿಯ ಜೊತೆಗಿದ್ದರೆ, ಒಂದು ಮಗು ಮಹಿಳೆ ಜೊತೆಗಿದೆ. ಜೀವನೋಪಾಯಕ್ಕಾಗಿ ಈಕೆ ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾಳೆ.
ಕೆಲ ದಿನಗಳ ಹಿಂದೆ ಮಹಿಳೆ ಗ್ರಾಮಕ್ಕೆ ಬಂದಿದ್ದು, ಕೊಡಗಿನ ಕಾಫಿ ತೋಟದಲ್ಲಿ ಪರಿಚಯವಾದ ನೆರೆ ಗ್ರಾಮ ನೇರಳೆ ಗ್ರಾಮದ ಯುವಕ ಗುರುವಾರ ರಾತ್ರಿ ಈಕೆಯ ಮನೆಗೆ ಬಂದಿದ್ದಾನೆ. ಇದನ್ನು ಗಮನಿಸಿದ ಆಕೆಯ ಪತಿ, ಹೊರಗಿನಿಂದ ಮನೆಯ ಚಿಲಕ ಹಾಕಿ, ತನ್ನ ಸಹೋದರನನ್ನು ಕರೆತಂದು ಗ್ರಾಮಸ್ಥರ ಸಮ್ಮುಖದಲ್ಲೇ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾನೆ. ಮಹಿಳೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಅದನ್ನು ಲೆಕ್ಕಿಸದೇ ಗ್ರಾಮಸ್ಥರು ಈ ದೃಶ್ಯವನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದು, ಈ ಘಟನೆಯನ್ನು ಯಾರೋ ಒಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲವು ಗಂಟೆಗಳ ನಂತರ ಗ್ರಾಮದ ಮುಖಂಡರು, ಯುವಕ ಮತ್ತು ಮಹಿಳೆಯನ್ನು ರಕ್ಷಿಸಿ ಪಂಚಾಯಿತಿ ನಡೆಸಿದ ನಂತರ ಯುವಕನ ಗ್ರಾಮವಾದ ನೇರಳೆಯ ಮುಖಂಡರಿಗೆ ವಿಷಯ ತಿಳಿಸಿದ್ದು, ಅವರು ಕೂಡ ಸ್ಥಳಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಮೈಸೂರಿನಲ್ಲಿ ಅನೈತಿಕ ಸಂಬಂಧ ಶಂಕೆ : ಇಬ್ಬರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು
ತನ್ನ ಪತ್ನಿ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆಕೆಯ ಗಂಡ ತಿಳಿಸಿದರೆ, ಯುವಕನನ್ನು ಕಾಫಿ ಕುಡಿಯಲು ಕರೆದಿದ್ದೆ ಅಷ್ಟೇ. ನಮ್ಮ ನಡುವೆ ಯಾವ ಅನೈತಿಕ ಸಂಬಂಧ ಇಲ್ಲ. ಯುವಕ ನಮ್ಮ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಗಂಡ ಮನೆಯ ಬಾಗಿಲನ್ನು ಹೊರಗಿನಿಂದ ಹಾಕಿ, ಸಹೋದರನನ್ನು ಕರೆತಂದು ನಮ್ಮಿಬ್ಬರನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಕೌಲಂದೆ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀಸರು ಆಕೆಯ ಗಂಡನನ್ನು ಬಂಧಿಸಿದ್ದು, ಪರಾರಿಯಾಗಿರುವ ಆಕೆಯ ಮೈದುನನಿಗೆ ಹುಡುಕಾಟ ನಡೆಸಿದ್ದಾರೆ.
ವರದಿ ಕೇಳಿದ ಮಹಿಳಾ ಆಯೋಗ:
ವಿವಾಹಿತೆಯನ್ನ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗ ಜಿಲ್ಲಾ ಎಸ್ಪಿಗೆ ವರದಿ ಕೇಳಿದೆ.