ಮೈಸೂರು: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ದುಶ್ಮನ್ಗಳ ಸರ್ಕಾರ. ಹೇಗೆ ಉಳಿಯಲು ಸಾಧ್ಯವೆಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ, ಹೆಚ್. ಡಿ.ದೇವೆಗೌಡರಿಗೆ ಸಿದ್ದರಾಮಯ್ಯ ದುಶ್ಮನ್, ಸಿದ್ದರಾಮಯ್ಯಗೆ ದೇವೆಗೌಡ ದುಶ್ಮನ್, ಕುಮಾರಸ್ವಾಮೀನೂ ದುಶ್ಮನ್ ಹೀಗೆ ದೋಸ್ತಿಗಳೇ ದುಶ್ಮನ್ಗಳಾಗಿರುವಾಗ ಸರ್ಕಾರ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಇವರು ಹೇಗೆ ದೋಸ್ತಿಗಳಾಗುತ್ತಾರೆ? ಬೆಳಿಗ್ಗೆ ಹೊಗಳುತ್ತಾರೆ ಸಂಜೆ ಬೈಯುತ್ತಾರೆ. ಈ ಸರ್ಕಾರ ಉಳಿಯೊಲ್ಲ. ಸರ್ಕಾರ ಬಿದ್ದ ಮೇಲೆ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ನೆಮ್ಮದಿಯಾಗಿ ಕುಳಿತುಕೊಳ್ತಾರೆ. ಕಾಂಗ್ರೆಸ್ಗೆ ಹಾಳೂರುಗೆ ಉಳಿದವನೆ ಗೌಡ ಅನ್ನೊ ಹಾಗೆ ಸಿದ್ದರಾಮಯ್ಯ ಆಗ್ತಾರೆ ಎಂದು ಕುಟುಕಿದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆ ಮಾಡುವುದು ಶತಸಿದ್ಧ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವೇ ನೇರ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರದ ಶಾಸಕರುಗಳು ಶತ್ರುಗಳಂತೆ ವರ್ತಿಸುತ್ತಿದ್ದಾರೆ. ಕುಮಾರಸ್ವಾಮಿ ಸರ್ಕಾರ ನಡೆಸಲು ಶಾಸಕರ ಸಂಖ್ಯಾಬಲ ಕಳೆದುಕೊಂಡಿದ್ದಾರೆ ಎಂದರು.
ಬಿಜೆಪಿಗೆ ಸಂಖ್ಯಾಬಲ ಹೆಚ್ಚಾಗಿದೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರೇ ಕಾಂಗ್ರೆಸ್ ಪಕ್ಷ ತ್ಯಜಿಸಿದ್ದಾರೆ. ರಿವರ್ಸ್ ಆಪರೇಷನ್ ಮಾಡಲು ಸಾಧ್ಯವೇ ಇಲ್ಲ ಎಂದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಹೆಚ್ ವಿಶ್ವನಾಥ್ ಅವರನ್ನು ಆ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ .ವಿಶ್ವನಾಥ್ ಅವರು ನನಗೆ ವೈಯಕ್ತಿಕವಾಗಿ ತೀರಾ ಪರಿಚಯವಿದ್ದರು. ಎಂದ ಅವರು, ಒಂದೆರಡು ದಿನಗಳಲ್ಲಿ ಸರ್ಕಾರ ಪತನವಾಗುವುದು ಖಚಿತ ಎಂದು ತಿಳಿಸಿದರು.