ಬೆಂಗಳೂರು: ಉದ್ಯೋಗಕ್ಕೆ ತೆರಳದ ಕಾರಣಕ್ಕೆ ತನ್ನ ಮಗನನ್ನು ಬೈಯುತ್ತಿದ್ದ ವ್ಯಕ್ತಿಯೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿ ಆತನ ಸಾವಿಗೆ ಕಾರಣರಾಗಿದ್ದ ನಾಲ್ವರು ದೋಷಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 5 ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ 4 ತಿಂಗಳಿಗೆ ಇಳಿಸಿತು. ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಐದು ವರ್ಷ ಜೈಲು ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಹುಲ್ಕೂರು ಗ್ರಾಮದ ಗೋವಿಂದ ನಾಯ್ಕ, ಸಣ್ಣ ಸ್ವಾಮಿ, ಪರಿ ನಾಯ್ಕ ಮತ್ತು ಚನ್ನ ನಾಯ್ಕ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಪ್ರಕರಣವು ವಿಚಾರಣಾ ಹಂತದಲ್ಲಿರುವಾಗ ಮತ್ತು ವಿಚಾರಣೆಯ ನಂತರ ಅನುಭವಿಸಿರುವ ನಾಲ್ಕು ತಿಂಗಳ ಜೈಲು ವಾಸವನ್ನೇ ಪರಿಗಣಿಸಿದ ಹೈಕೋರ್ಟ್, ಎಲ್ಲ ನಾಲ್ವರು ಮೇಲ್ಮನವಿದಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿತು.
ಅಪರಾಧಿಗಳು ನಡೆಸಿದ ಹಲ್ಲೆಯಿಂದಲೇ ಗೋವಿಂದ ನಾಯ್ಕ ಸಾವನ್ನಪ್ಪಿರುವುದು ಸಾಬೀತಾಗಿದೆ. ಹಾಗಾಗಿ, ಅವರನ್ನು ದೋಷಿಗಳಾಗಿ ತೀರ್ಮಾನಿಸಿದ ವಿಚಾರಣಾ ನ್ಯಾಯಾಲಯದ ಆದೇಶವು ಸೂಕ್ತವಾಗಿದೆ. ಆದರೆ, ಅಪರಾಧಿಗಳಿಗೆ ಗೋವಿಂದ ನಾಯ್ಕ ಅವರನ್ನು ಕೊಲೆ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಉದ್ದೇಶಪೂರ್ವಕವಲ್ಲದ ಕೊಲೆ ಅಪರಾಧಕ್ಕೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಇಲ್ಲವೇ ಎರಡೂ ವಿಧಿಸಲು ಅವಕಾಶವಿದೆ.
ಪ್ರಕರಣದ ಸನ್ನಿವೇಶ-ಸಂದರ್ಭ, ಆರೋಪಿಗಳ ವಯಸ್ಸು ಪರಿಗಣಿಸಿದರೆ ಅವರನ್ನು ಜೈಲಿಗೆ ಕಳುಹಿಸುವ ಬದಲು ಈಗಾಗಲೇ ಅವರು ಅನುಭವಿಸಿರುವ ನಾಲ್ಕು ತಿಂಗಳ ಜೈಲು ವಾಸವನ್ನು ಪರಿಗಣಿಸಿದರೆ ಮತ್ತು ದಂಡ ಮೊತ್ತವನ್ನು ಹೆಚ್ಚಿಸಿದರೆ ನ್ಯಾಯೋಚಿತವಾಗುತ್ತದೆ ಎಂದು ನ್ಯಾಯಪೀಠ ತೀಮಾನಿಸಿತು. ಅರ್ಜಿದಾರರು ದಂಡ ತಲಾ 50 ಸಾವಿರ ರೂ. ದಂಡ ಪಾವತಿಸಬೇಕು ಎಂದು ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ: 2009ರ ಫೆ.10ರಂದು ರಾತ್ರಿ 10.30ರ ವೇಳೆಯಲ್ಲಿ ಉದ್ಯೋಗಕ್ಕೆ ಹೋಗದ ಕಾರಣಕ್ಕೆ ಗೋಪಾಲ ನಾಯ್ಕ ಎಂಬಾತನಿಗೆ ಆತನ ತಂದೆ ಗೋವಿಂದ ನಾಯ್ಕ ಬೈಯುತ್ತಿದ್ದರು. ತಮ್ಮನ್ನು ಬೈಯುತ್ತಿರುವುದಾಗಿ ತಪ್ಪಾಗಿ ಭಾವಿಸಿದ ನೆರೆಹೊರೆಯ ನಿವಾಸಿಗಳಾದ ಅರ್ಜಿದಾರರು, ಗೋವಿಂದ ನಾಯ್ಕ ಅವರ ಮನೆಗೆ ನುಗ್ಗಿ ಜಗಳ ತೆಗೆದು ಹಲ್ಲೆ ಮಾಡಿದ್ದರು.
ಇದರಿಂದ ಗೋವಿಂದ ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿದ್ದರು. ವೈದ್ಯರು ಪರಿಶೀಲಿಸಿ, ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ಪ್ರಕರಣ ಸಂಬಂಧ ಮೃತ ಪುತ್ರ ಗೋಪಾಲ ನಾಯ್ಕ, ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ನಂತರ ತನಿಖೆ ಪೂರ್ಣಗೊಳಿಸಿ, ಕೊಲೆ ಮತ್ತು ಮನೆ ಅತಿಕ್ರಮ ಪ್ರವೇಶ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ನಾಲ್ವರು ಆರೋಪಿಗಳನ್ನು ಉದ್ದೇಶಪೂರ್ವಕವಲ್ಲದ ಕೊಲೆ (ಐಪಿಸಿ ಸೆಕ್ಷನ್ 304 (2) ಅಪರಾಧ ಅಡಿಯಲ್ಲಿ ದೋಷಿಗಳಾಗಿ ತೀರ್ಮಾನಿಸಿ ತಲಾ ಐದು ವರ್ಷ ಜೈಲು ಶಿಕ್ಷೆ ಮತ್ತು ಮೂರು ಸಾವಿರ ರೂ. ದಂಡ ವಿಧಿಸಿ ಮೈಸೂರು ಪ್ರಧಾನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು 2011ರ ಅ.1ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸಲು ಕೋರಿ ನಾಲ್ವರು ದೋಷಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಜೈನ ಮುನಿಗಳ ಹತ್ಯೆ ಕೇಸ್: ಇಬ್ಬರು ಆರೋಪಿಗಳನ್ನ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್