ಮೈಸೂರು: ನೂತನ ಸಂಸತ್ ಭವನದ ಉದ್ಘಾಟನೆ ದೇಶದ ಸಂವಿಧಾನವನ್ನೇ ಅಣಕ ಮಾಡಿದಂತೆ ಇತ್ತು. ಈ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿಯವರ ಪಟ್ಟಾಭಿಷೇಕದಂತೆ ಇತ್ತು. ನೂತನ ಸಂಸತ್ ಉದ್ಘಾಟನೆ ಅಂಬೇಡ್ಕರ್ ಹಾಗೂ ರಾಷ್ಟ್ರಪತಿಗಳಿಗೆ ಅಪಮಾನ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಸಂವಿಧಾನದ ಆಶಯಗಳನ್ನೇ ಅಣಕ ಮಾಡುವ ಕಾರ್ಯಕ್ರಮದ ರೀತಿಯಲ್ಲಿ ಇತ್ತು. ಈ ಕಾರ್ಯಕ್ರಮ ಕೇವಲ ಪ್ರಧಾನಿ ನರೇಂದ್ರ ಮೋದಿಯವರ ಪಟ್ಟಾಭಿಷೇಕದ ರೀತಿಯಲ್ಲಿ ನಡೆಯಿತು. ಇಲ್ಲಿ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಹಾಗೂ ರಾಷ್ಟ್ರಪತಿಯವರಿಗೆ ಅಪಮಾನ ಮಾಡುವ ರೀತಿಯಲ್ಲಿ ನಡೆದ ಕಾರ್ಯಕ್ರಮ ನಮಗೆ ನೋವು ತಂದಿದ್ದು. ಈ ಕಾರ್ಯಕ್ರಮ ಕೇವಲ ನಾನಷ್ಟೆ ದೇಶದ ಸಂರಕ್ಷಕ ಎಂಬ ಭ್ರಮೆಯನ್ನು ಬಿತ್ತುವ ಕೆಲಸವನ್ನು ಮೋದಿ ಮಾಡಿದರು. ಈ ಮೂಲಕ 140 ಕೋಟಿ ಜನರಿಗೆ ಅಪಮಾನ ಮಾಡಲಾಗಿದೆ ಎಂದರು.
ಸಂಸತ್ನಲ್ಲಿ ಸ್ಥಾಪನೆಯಾಗಬೇಕಿರುವುದು ರಾಷ್ಟ್ರ ಲಾಂಛನ, ಆದರೆ, ಪ್ರಧಾನಿ ನರೇಂದ್ರ ಮೋದಿ ಧರ್ಮ ಲಾಂಛನ ಸ್ಥಾಪನೆ ಮಾಡಿದ್ದಾರೆ. ಇದರಿಂದ ಜಾತ್ಯತೀತಗೆ ಪೆಟ್ಟು ಬಿದ್ದಿದ್ದು, ಸಂವಿಧಾನಕ್ಕೆ ಅಪಚಾರವಾಗಿದೆ. ಒಂದು ರೀತಿಯಲ್ಲಿ ಪುರೋಹಿತ ಶಾಹಿ ವ್ಯವಸ್ಥೆಯ ಮರುಸ್ಥಾಪನೆ ಆಗಿದೆ. ಧರ್ಮದ ಬಗ್ಗೆ ಗೌರವ ಇದ್ದರೆ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಸಂಸತ್ ಭವನದಲ್ಲಿ ಅಲ್ಲ. 9 ವರ್ಷದ ಹಿಂದೆ ಸಂಸತ್ ಪ್ರವೇಶ ಮಾಡಿದಾಗ ತಲೆ ಬಗ್ಗಿಸಿ ಸಂಸತ್ಗೆ ನಮಸ್ಕಾರ ಮಾಡಿದ್ದೀರಿ. ಆಗ ದೇಶದ ಜನತೆ ಪಾದಗಳಿಗೆ ನಮಸ್ಕಾರ ಮಾಡುತ್ತಿದ್ದೀನಿ ಎಂದು ಹೇಳಿದ್ದೀರಿ. ಆಗ ಹೇಳಿದ್ದೆಲ್ಲ ಸುಳ್ಳು ಎನಿಸುತ್ತದೆ. ಈ ಬಗ್ಗೆ ಚರ್ಚೆ ಆಗಬೇಕು. ನೂತನ ಸಂಸತ್ ಭವನದಲ್ಲಿ 1200 ಜನರಿಗೆ ಅವಕಾಶ ನೀಡಲಾಗಿದ್ದು. 2029ಕ್ಕೆ ಸಂಸತ್ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದರು.
ಇನ್ನೂ 2014ರ ಚುನಾವಣೆಯೇ ಆಗಿಲ್ಲ, ಆಗಲೇ 2029ರ ಚುನಾವಣೆ ಬಗ್ಗೆ ಮಾತನಾಡುತ್ತಿದ್ದೀರಿ. ದಕ್ಷಿಣ ಭಾರತಕ್ಕೆ ಸರಿಯಾಗಿ ಅಧಿಕಾರ ಹಾಗೂ ಜಿಎಸ್‌ಟಿ ಪಾಲು ಹಂಚಿಕೆ ಆಗುತ್ತಿಲ್ಲ. ಬರೀ ಬಸವಣ್ಣನವರ ಬಗ್ಗೆ ಬೊಗಳೆ ಬಿಡುತ್ತೀರಿ. ನಿಮ್ಮ ಅಂತರಂಗದಲ್ಲಿ ಬಿಜೆಪಿ ಮನಸ್ಥಿತಿ ಇದೇ ಎಂದು ಎಚ್.ವಿಶ್ವನಾಥ್ ಟೀಕಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ಸರಿಯಿಲ್ಲ: ಶಾಲೆಗಳು ಈಗಾಗಲೇ ಆರಂಭವಾಗಿದ್ದು. ಪಠ್ಯಗಳನ್ನು ಕೆಲವು ಕಡೆ ವಿತರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಆತುರ ತೋರಬಾರದು. ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಅನಗತ್ಯವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಪಠ್ಯ ಪುಸ್ತಕ ಪರಿಷ್ಕರಣೆಯನ್ನ ಮಾಡುವುದಾದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಮಾಡುವುದು ಒಳಿತು ಎಂದು ಎಚ್. ವಿಶ್ವನಾಥ್ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿರುವ ಸಂಸದ ಬ್ರಿಜ್ ಭೂಷಣ್ ಸಿಂಗ್ಗೆ ದಾವೂದ್ ಇಬ್ರಾಹಿಂ ಜೊತೆ ನಂಟಿದೆ. ದಾವೂದ್ ಇಬ್ರಾಹಿಂಗೆ ಬ್ರಿಜ್ ಭೂಷಣ್ ಸಿಂಗ್ ಕೇಸ್ ನಲ್ಲಿ ಅಸೋಸಿಯೇಟ್ಸ್ ಆಗಿದ್ದಾನೆ. ಅಂತವನ ರಕ್ಷಣೆಗೆ ಬಿಜೆಪಿ ನಿಂತಿರುವುದು ಸರಿಯಲ್ಲ. ಸಂಸತ್ನಲ್ಲಿ ರಾಜ ದಂಡ ಪ್ರತಿಷ್ಠಾಪಿಸಿ ಹೊರಗೆ ಮಹಿಳಾ ಕುಸ್ತಿಪಟುಗಳ ಮೇಲೆ ದಂಡ ಪ್ರಯೋಗ ಸರಿಯಲ್ಲ. ಕೂಡಲೇ ಆರೋಪಕ್ಕೆ ಗುರಿಯಾಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಿಶ್ವನಾಥ್ ಆಗ್ರಹಿಸಿದರು.
ಕಟೀಲ್ ಹೇಳಿಕೆಗೆ ತಿರುಗೇಟು: ಕಾಂಗ್ರೆಸ್ ನಂತೆ ಮೋದಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಮುಂದಿನ ಲೋಕಸಭಾ ಚುನಾವಣೆಗೆ ಮತ ಕೇಳಲು ಬಂದಾಗ ಗ್ಯಾರಂಟಿ ಕಾರ್ಡ್ ಕೊಟ್ಟಾಗ ಮತ ಕೊಡುತ್ತೇವೆ. ಈಗ ಕೊಟ್ಟಿರುವ ಭರವಸೆಗಳನ್ನು ಈಡೇರಿಸಿ ಎಂದು ಪಟ್ಟು ಹಿಡಿದಾಗ ಬಿಜೆಪಿಯವರಿಗೆ ಬುದ್ದಿ ಬರುತ್ತದೆ ಎಂದು ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದರು.
ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ಸ್ಪರ್ಧೆ: ಪಕ್ಷದ ತೀರ್ಮಾನಕ್ಕೆ ಬದ್ಧ- ಸಂಸದ ಸಂಗಣ್ಣ ಕರಡಿ