ಮೈಸೂರು : ನಾವು ಇದೀಗ ಮಹಾಮಾರಿ ಕೋವಿಡ್ನ ವಿಷವರ್ತುಲದಲ್ಲಿದ್ದೇವೆ. ಹಾಗಾಗಿ ಶಾಲೆ ಆರಂಭ ವಿಚಾರ ಕೇವಲ ಜನಪ್ರತಿನಿಧಿಗಳ ತೀರ್ಮಾನವಾಗಬಾರದು ಎಂದು ಸ್ವಪಕ್ಷೀಯ ಸಚಿವರ ವಿರುದ್ಧವೇ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲೆ ಆರಂಭದ ವಿಚಾರದಲ್ಲಿ ಸಚಿವ ಸುರೇಶ್ ಕುಮಾರ್ ಅವರು ಶಾಸಕರಿಗೆ ಪತ್ರ ಬರೆದಿದ್ದಾರೆ. ಆದರೆ, ಇದು ಜನಪ್ರತಿನಿಧಿಗಳ ತೀರ್ಮಾನ ಆಗಬಾರದು. ಮಕ್ಕಳ ಹಾಗೂ ಪೋಷಕರ ಜೀವನದ ಜೊತೆ ಚೆಲ್ಲಾಟ ಆಡಬೇಡಿ ಎಂದು ಸಲಹೆ ನೀಡಿದ್ದಾರೆ.
ಯಾವ ಜನಪ್ರತಿನಿಧಿಯೂ ಚುನಾವಣೆ ವೇಳೆ ಶಿಕ್ಷಣದ ಬಗ್ಗೆ ಚರ್ಚೆ ಮಾಡಿಲ್ಲ. ಎಲ್ಲ ಜನಪ್ರತಿನಿಧಿಗಳಿಗೂ ಶಿಕ್ಷಣದ ಬಗ್ಗೆ ಎಲ್ಲ ಮಾಹಿತಿ ಇರೋಲ್ಲ. ಹಾಗಾಗಿ ಅವರ ಸಲಹೆಯಿಂದ ಶಾಲೆ ಆರಂಭ ಮಾಡುವ ನಿರ್ಧಾರ ತಪ್ಪು. ನೀವು ಶಾಲೆ ಆರಂಭಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ ಅನ್ನೋದನ್ನ ತಿಳಿಸಿ ಎಂದಿದ್ದಾರೆ.
ಎಲ್ಲವನ್ನು ಜನಪ್ರತಿನಿಧಿಗಳ ಮೇಲೆ ಹಾಕಬಾರದು. ಶಿಕ್ಷಣ ಸಚಿವರಾಗಿ ಶಾಲೆ ಆರಂಭಕ್ಕೆ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಮೊದಲು ತಿಳಿಸಿ. ವಿನಾಕಾರಣ ಒಂದು ಕಾಗದ ಬರೆದು ಕುಳಿತುಕೊಂಡರೆ ಅದು ಸರಿಯಲ್ಲ. ಇದು ಶಿಕ್ಷಣ ಮಂತ್ರಿಯೊಬ್ಬ ಮಾಡುವ ಕೆಲಸವೂ ಅಲ್ಲ. ಮಕ್ಕಳ ಜೀವದ ಜೊತೆ ಚೆಲ್ಲಾಟ ಬೇಡ. ಪೋಷಕರ ಮನಸ್ಸಿನ ಮೇಲೆ ಚೆಲ್ಲಾಟ ಶೋಭಾಯಮಾನ ಸರಿ ಅಲ್ಲ. ನೀವು ಪೋಷಕರು, ಮಕ್ಕಳು, ಶಿಕ್ಷಕರನ್ನು ಗೊಂದಲದಲ್ಲಿ ಇಡಬೇಡಿ ಎಂದ ವಿಶ್ವನಾಥ್, ಹೇಳಿಕೆ ಕೊಟ್ಟು ವಾಪಸ್ ಪಡೆದು ಮತ್ತೆ ಗೊಂದಲ ಸೃಷ್ಟಿಸಬೇಡಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಕಿವಿಮಾತು ಹೇಳಿದರು. ಸರ್ಕಾರಿ ಶಾಲೆ ಜೊತೆ ಖಾಸಗಿ ಶಾಲೆ ಬಗ್ಗೆಯೂ ಯೋಚನೆ ಮಾಡಬೇಕು. ಎಲ್ಲವನ್ನು ಚರ್ಚಿಸಿ ತೀರ್ಮಾನ ಕೈಗೊಂಡರೆ ಒಳಿತು ಎಂದರು.