ಮೈಸೂರು: ಕೋವಿಡ್ 2ನೇ ಅಲೆಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರದಲ್ಲಿ ಎಲ್ಲಾ ಅಧಿಕಾರ ಮುಖ್ಯಮಂತ್ರಿಗಳ ಬಳಿ ಇದ್ದು, ಮಂತ್ರಿಗಳು, ಉಪ ಮುಖ್ಯಮಂತ್ರಿಗಳ ನಡುವೆ ಸಮನ್ವಯ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಕೋವಿಡ್ ಸಾವು-ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸತ್ತವರ ಅಂತ್ಯಕ್ರಿಯೆ ನಡೆಸಲು ಸ್ಮಶಾನ ಇಲ್ಲದೆ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಏನೂ ಆಗಿಲ್ಲ ಎಂಬ ರೀತಿಯಲ್ಲಿ ವರ್ತನೆ ಮಾಡುತ್ತಿರುವುದು ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ.
ಈ ನಡುವೆ ಆರೋಗ್ಯ ಸಚಿವರು ಕೋವಿಡ್ ಹೆಚ್ಚಾಗಲು ಜನರ ಬೇಜವಾಬ್ದಾರಿಯೇ ಕಾರಣ ಎಂದು ಹೇಳಿಕೆ ಕೊಡುತ್ತಿರುವುದು ಸರಿಯಲ್ಲ. ಇವರ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಜನರ ಮೇಲೆ ದೂರುವುದು ಸರಿಯಲ್ಲ. ಮೊದಲು ಕೋವಿಡ್ನಿಂದ ಸತ್ತವರಿಗೆ ಜಾಗ ಹಾಗೂ ಕೋವಿಡ್ನಿಂದ ಬಳಲುತ್ತಿರುವವರಿಗೆ ಆಸ್ಪತ್ರೆ, ವೆಂಟಿಲೇಟರ್, ಆಕ್ಸಿಜನ್ ನೀಡಬೇಕು. ಅದನ್ನು ಮೊದಲು ಮಾಡಬೇಕು. ಆದರೆ, ಯಾವುದೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಸಿಎಂ ಮಂತ್ರಿಗಳಿಗೆ ಕೊಟ್ಟಿಲ್ಲ. ಐಎಎಸ್ ಅಧಿಕಾರಿಗಳು ಮಂತ್ರಿಗಳ ಮಾತನ್ನು ಕೇಳುತ್ತಿಲ್ಲ. ರಾಜ್ಯದಲ್ಲಿರುವ 3 ಜನ ಉಪ ಮುಖ್ಯಮಂತ್ರಿಗಳು ನಾಮಕಾವಾಸ್ತೆಗೆ ಮಾತ್ರ ಇದ್ದಾರೆ. ಕಳೆದ ಬಾರಿ ಬೆಂಗಳೂರಿನಲ್ಲಿ ಮಾಡಿದ 2 ಸಾವಿರ ಕೋವಿಡ್ ಬೆಡ್ ಹಾಸಿಗೆ ಏನಾಯ್ತು ಎಂದು ಪ್ರಶ್ನಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ನ 2ನೇ ಅಲೆ ಬಗ್ಗೆ ಎಚ್ಚರಿಕೆ ನೀಡಿತ್ತು. ಸರ್ಕಾರ ಮತ್ತು ಅಧಿಕಾರಿಗಳು ಇದನ್ನು ಗಮನಿಸದೆ ಬಿಲ್ ಮಾಡುವುದರಲ್ಲೇ ಬ್ಯುಸಿ ಆಗಿದ್ದಾರೆ. ರಾಜ್ಯ ಸರ್ಕಾರ ಜನರಿಗೆ ಆರೋಗ್ಯ ಸೇವೆ ಒದಗಿಸುವುದರಲ್ಲಿ ಸೋತಿದೆ ಎಂದು ವಾಗ್ದಾಳಿ ನಡೆಸಿದ ಅವರು, ಕೋವಿಡ್ ಕಾಲದಲ್ಲಿ ಏನು ನಡೆಯಿತ್ತಿದೆ ಎಂಬುದು ಜನರಿಗೆ ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿಗಳ ಹೆಲ್ತ್ ಬುಲೆಟಿನ್ ಸಹ ಜನರಿಗೆ ಗೊತ್ತಾಗಲಿಲ್ಲ. ಆ ರೀತಿ ರಾಜ್ಯದಲ್ಲಿ ಕೊರೊನಾ ವಿಚಾರವಾಗಿ ಜನರು ಗೊಂದಲದಲ್ಲಿದ್ದಾರೆ ಎಂದರು.
ಇಂತಹ ಸ್ಥಿತಿಯಲ್ಲಿ ಲಾಕ್ಡೌನ್ ಮಾಡುವುದು ಸರಿಯಲ್ಲ. ಸರ್ಕಾರದಲ್ಲಿ ಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ನಡುವೆ ಆಡಳಿತದಲ್ಲಿ ಸಮನ್ವಯತೆಯಿಲ್ಲ. ಈ ಸನ್ನಿವೇಶಗಳನ್ನು ಎದುರಿಸಲು ಸರ್ಕಾರ ವಿಫಲವಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿಸಿದೆ. ಮುಖ್ಯವಾಗಿ ಮಂತ್ರಿಗಳಿಗೆ ಅಧಿಕಾರ ಕೊಡದೆ ಸಿಎಂ ಎಲ್ಲಾ ಅಧಿಕಾರವನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವುದು ಈ ರೀತಿ ಸನ್ನಿವೇಶ ಸೃಷ್ಟಿಯಾಗಲು ಕಾರಣ ಎಂದು ವಾಗ್ದಾಳಿ ನಡೆಸಿದರು.
ಓದಿ: ಕೋವಿಡ್ ಉಲ್ಬಣದ ನಡುವೆಯೂ ಕರ್ತವ್ಯಕ್ಕಾಗಿ ರಸ್ತೆಗಿಳಿದ ಗರ್ಭಿಣಿ ಡಿವೈಎಸ್ಪಿ