ಮೈಸೂರು : ನವರಾತ್ರಿ ಸಂದರ್ಭದಲ್ಲಿ ಮಾತ್ರ ನೋಡಸಿಗುವ ರತ್ನ ಖಚಿತ ಸಿಂಹಾಸನವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಮೈಸೂರು ಅರಮನೆಗೆ ಆಗಮಿಸುತ್ತಾರೆ. ಇದೀಗ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಈ ಸಿಂಹಾಸನ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಆದರೆ ಫೋಟೋ ವಿಡಿಯೋ ತೆಗೆಯುವುದನ್ನು ನಿರ್ಬಂಧಿಸಲಾಗಿದೆ.
ಸಿಂಹಾಸನ ನೋಡಲು 50 ರೂಪಾಯಿ ಟಿಕೆಟ್: ಅಕ್ಟೋಬರ್ 9ರಂದು ಅರಮನೆಯ ಖಾಸಗಿ ದರ್ಬಾರ್ ಹಾಲ್ನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸಿಂಹಾಸನ ಜೋಡಣೆ ಕಾರ್ಯ ನಡೆದಿದೆ. ಸಿಂಹಾಸನಕ್ಕೆ ಪ್ರತ್ಯೇಕ ಪರದೆ ಅಳವಡಿಸಿ ಮುಚ್ಚಲಾಗಿದ್ದು, ಪರದೆಯ ಒಳ ಹೋಗಿ ಸಿಂಹಾಸನ ನೋಡಲು ಪ್ರವಾಸಿಗರಿಗೆ 50 ರೂಪಾಯಿ ಟಿಕೆಟ್ ನಿಗದಿಪಡಿಸಲಾಗಿದೆ.
ಅರಮನೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಇದ್ದು, ದರ್ಬಾರ್ ಹಾಲ್ನಲ್ಲಿ ಅರಮನೆ ಆಡಳಿತ ಮಂಡಳಿ ಭದ್ರತೆಗೆ ಹಾಕಿರುವ ಸಿಸಿಟಿವಿಯನ್ನೂ ಮುಚ್ಚಲಾಗಿದೆ. ಅಕ್ಟೋಬರ್ 10 ಅಂದರೆ ಇಂದಿನಿಂದ ನವೆಂಬರ್ 7ರ ವರೆಗೆ ಸಿಂಹಾಸನವನ್ನು ಪ್ರವಾಸಿಗರು ವೀಕ್ಷಿಸಲು ಅವಕಾಶವಿದೆ. ಇದಕ್ಕಾಗಿ ದರ್ಬಾರ್ ಹಾಲ್ನಲ್ಲಿ ರಾಜವಂಶಸ್ಥರ ಕಡೆಯಿಂದ ವಿಶೇಷ ಕೌಂಟರ್ ಕೂಡಾ ತೆರೆಯಲಾಗಿದೆ.
ಈ ಸಿಂಹಾಸನಕ್ಕೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ರಾಜವಂಶಸ್ಥರಿಂದ ಪೂಜೆ ನಡೆಯುತ್ತದೆ. ವಿಶಿಷ್ಟ ಆಕಾರದಲ್ಲಿರುವ ಭವ್ಯ ಸಿಂಹಾಸನದ ಕೆಳ ಭಾಗದ 4 ಕಡೆ ಕುದುರೆಗಳ ಲಾಂಛನ, ಸಿಂಹಾಸನಕ್ಕಿರುವ ಮೆಟ್ಟಿಲುಗಳಲ್ಲಿ ರಾಜ ಪರಂಪರೆಯ ಸಿಂಹ ಲಾಂಛನ, ಮೆಟ್ಟಿಲುಗಳ ಮೇಲೆ ಹೊದಿಕೆಯಾಕಾರದ ಚಿನ್ನದ ರಾಜಪರಂಪರೆಯ ಲಾಂಛನಗಳು, ರಾಜರು ಕುಳಿತುಕೊಳ್ಳುವ ಹಿಂಭಾಗದಲ್ಲಿ ರಾಜ ಲಾಂಛನ ಗಂಡಬೇರುಂಡ, ಚಿನ್ನದ ಛತ್ರಿ ಹಾಗೂ ಛತ್ರಿಯ ಮೇಲಿನ ಭಾಗದಲ್ಲಿ ನವಿಲಿನ ಆಕಾರ, ನವಿಲಿನ ಕಣ್ಣುಗಳು ವಜ್ರದ ಅಪರೂಪದ ಹರಳುಗಳಿವೆ.
ರಾಜವಂಶಸ್ಥರ ಶರನ್ನವರಾತ್ರಿಯ ಪೂಜಾ ಕೈಂಕರ್ಯಕ್ಕೆ ಪೂರ್ವಭಾವಿಯಾಗಿ ಈ ಸಿಂಹಾಸನವನ್ನು ನಿನ್ನೆ (ಅಕ್ಟೋಬರ್ 10) ಬೆಳಗ್ಗೆ 10:05 ರಿಂದ 10:35ರ ಶುಭ ಲಗ್ನದಲ್ಲಿ ನುರಿತ ಅರಮನೆಯ ಕೆಲಸಗಾರರಿಂದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಜೋಡಣೆ ಮಾಡಲಾಗಿತ್ತು.
ಇದನ್ನೂ ಓದಿ: ಮೈಸೂರು ದಸರಾ: ಅಂಬಾವಿಲಾಸ ದರ್ಬಾರ್ ಹಾಲ್ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ