ಮೈಸೂರು: ಎಸ್ಸಿ ಹಾಗೂ ಎಸ್‌ಟಿ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡಬೇಕು ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮನವಿ ಮಾಡಿದರು.
ಕಲಾಮಂದಿರದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮೈಸೂರು ವಿಭಾಗ ಮಟ್ಟದ ಸಮಾಲೋಚನಾ ಸಭೆಯಲ್ಲಿ ಎಸ್ಸಿ ಹಾಗೂ ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸುವ ಕುರಿತು ಮಹದೇವಪ್ಪ ಮಾತನಾಡಿದರು. 2021ರ ಜನಸಂಖ್ಯೆ ಆಧಾರದ ಮೇಲೆ ಎಸ್‌ಟಿ, ಎಸ್ಸಿ ಮೀಸಲಾತಿ ಹೆಚ್ಚಿಸಬೇಕು. ಹಲವು ಸೌಲಭ್ಯಗಳು ಸಿಗದೇ ಎಸ್‌ಟಿ, ಎಸ್ಸಿ ಸಮುದಾಯಗಳು ಅನಾಥವಾಗಿವೆ. ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಮೀಸಲಾತಿ ನೀಡುವುದು ಸರ್ಕಾರಕ್ಕೆ ಬಿಟ್ಟ ವಿಚಾರವೆಂದು ಸುಪ್ರೀಂಕೋರ್ಟ್ ಹೇಳಿರುವುದು ಕಳವಳ ಉಂಟುಮಾಡುತ್ತಿದೆ. ಸರ್ಕಾರ ತೆಗೆದುಕೊಳ್ಳುವ ಪ್ರತಿ ನಿರ್ಧಾರ ಈ ಸಮುದಾಯಗಳ ಮೇಲೆ ಪ್ರಭಾವ ಬೀರಲಿದ್ದು, ಈ ಸಮುದಾಯಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಳಿಕೊಂಡರು.
ಎಸ್‌ಟಿ ಹಾಗೂ ಎಸ್ಸಿ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಹಾಗೂ ಇತರೆ ರಾಜ್ಯ ಸರ್ಕಾರಗಳು ಹಣ ಮೀಸಲಿಡಬೇಕು. ಏಕಗವಾಕ್ಷಿ ಯೋಜನೆ ಮಾಡಿಕೊಡಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.