ಮೈಸೂರು: ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕಕ್ಕಿಂತ ವಿವೇಕಾನಂದ ಸ್ಮಾರಕ ಸುಂದರವಾಗಿ ಕಾಣಲಿ ಎಂಬ ಉದ್ದೇಶದಿಂದ ರಾಮಕೃಷ್ಣ ಆಶ್ರಮದವರು ಎನ್ಟಿಎಂಎಸ್ ಶಾಲೆಯ ಆವರಣದಲ್ಲಿಯೇ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದಾರೆ ಎಂದು ಮಾಜಿ ಮೇಯರ್ ಪುರುಷೋತ್ತಮ ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್ಟಿಎಂಎಸ್ ಶಾಲೆ ಸಮೀಪವೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮಾರಕ ಬೌದ್ಧ ಸ್ತೂಪ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ. ಇದರ ಎದುರು ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡಬೇಕು. ಅಂಬೇಡ್ಕರ್ ಸ್ಮಾರಕಕ್ಕಿಂತ ನಮ್ಮ ಸ್ಮಾರಕ ಸುಂದರವಾಗಿ ಕಾಣಲಿ ಎಂಬ ಉದ್ದೇಶದಿಂದ ಶಾಲೆ ಮುಚ್ಚಿದರೂ ಚಿಂತಿಯಿಲ್ಲ ಎಂಬುವುದು ಆಶ್ರಮದವರು ಹಾಗೂ ಭಕ್ತರ ವಿಚಾರವಾಗಿದೆ ಎಂದು ತಿಳಿಸಿದರು.
ಎನ್ಟಿಎಂಎಸ್ ಶಾಲೆಗೆ ಸುಮಾರು 120 ವರ್ಷಗಳ ಇತಿಹಾಸವಿದೆ. ಶಾಲೆಯ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಸಮೀಕ್ಷೆ ಮಾಡಿ ವರದಿ ಕಳುಹಿಸಿದ್ದರು. ಆದರೆ, ಸರ್ಕಾರ ವರದಿ ಪರಿಶೀಲಿಸದೆ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಅವಕಾಶ ನೀಡಿದೆ. ಆದರೆ ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡದಂತೆ ನ್ಯಾಯಾಲಯದಿಂದ ನಾನು ತಡೆಯಾಜ್ಞೆ ತರುತ್ತೇನೆ ಎಂದರು.