ಮೈಸೂರು: ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರ ಹಾಗೂ ನರೇಂದ್ರ ಮೋದಿಯವರು ಇಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪ್ರವಾಹ ಹಾಗೂ ಕೋವಿಡ್ ಬಂದಾಗ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ಈಗ ಮತ ಕೇಳಲು ಮಾತ್ರ ಬಂದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ 5 ದಿನಗಳಿಂದ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಸಿದ್ದರಾಮಯ್ಯ, ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ರಣತಂತ್ರ ಹಾಗೂ ಪ್ರಚಾರ ಕೈಗೊಂಡಿದ್ದಾರೆ. ನಿನ್ನೆ ಹುಣಸೂರು ಮತ್ತು ಹೆಚ್ಡಿ ಕೋಟೆ ತಾಲೂಕು ಕೇಂದ್ರಗಳಲ್ಲಿ ಪ್ರಚಾರ ಕೈಗೊಂಡಿದ್ದರು. ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಹಾಗೂ ನಂಜನಗೂಡು ಜತೆಗೆ ಮೈಸೂರು ನಗರದಲ್ಲಿ ಕೊನೆಯ ದಿನದ ಚುನಾವಣಾ ಪ್ರಚಾರ ನಡೆಸುವರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಪ್ರಧಾನಿ ಮೋದಿ ಪ್ರವಾಹ ಹಾಗೂ ಕೊರೊನಾ ಬಂದಾಗ ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ರಾಜ್ಯದಿಂದ ಸಂಗ್ರಹವಾಗುವ ತೆರಿಗೆ ಹಣ ವಾಪಸ್ ಕೊಡುತ್ತಿಲ್ಲ. ಇವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ವೋಟು ಕೇಳಲು ಬರುತ್ತಾರೆ?. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ದೇಶದಲ್ಲೇ ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಇವರ ಸರ್ಕಾರದ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಶೇ 40ರಷ್ಟು ಕಮಿಷನ್ ಬಗ್ಗೆ ಉತ್ತರ ಕೊಡುತ್ತಿಲ್ಲ. ಬದಲಾಗಿ ವೋಟು ಕೇಳಲು ಬಂದಿದ್ದಾರೆ" ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.
40 ಪರ್ಸೆಂಟ್ ಕಮಿಷನ್ ಸರ್ಕಾರ: ಈಗಿನ ಪರಿಸ್ಥಿತಿ ಒಂದು ರೂಪಾಯಿಗೆ 40% ಕಮಿಷನ್ ಬಿಜೆಪಿ ಸರ್ಕಾರದ್ದು. ಹಳೆಯ ಪರಿಸ್ಥಿತಿಗಿಂತಲೂ ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ಜಾಸ್ತಿಯಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚು ಮಾಡುತ್ತೇವೆ ಎಂದು ಹೇಳುವ ಬಿಜೆಪಿಯವರು ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಮೈಸೂರಿನಲ್ಲಿಯೇ ಬೀಡುಬಿಟ್ಟ ಸಿದ್ದರಾಮಯ್ಯ: ಕಳೆದ ಒಂದು ವಾರದಿಂದ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದಾರೆ. ಎರಡು ದಿನ ಚಿತ್ರ ನಟರೊಂದಿಗೆ ವರುಣಾದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿ, ನಂತರ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಜತೆಗೆ ವರುಣಾದಲ್ಲಿ ತಾವು ಗೆಲ್ಲಲು ಬೇಕಾದ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಅಲ್ಲದೇ ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ , ಹುಣಸೂರು, ಕೆಆರ್ ನಗರದಲ್ಲಿ ನಿನ್ನೆ(ಭಾನುವಾರ) ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ನಂಜನಗೂಡು, ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಮೈಸೂರು ನಗರದ ಚಾಮರಾಜ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಪ್ರತಿ ಬಾರಿ ತಮ್ಮ ಟಿ.ಕೆ.ಲೇಔಟ್ನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ಸಿದ್ದರಾಮಯ್ಯ ಮೊದಲ ಬಾರಿಗೆ ಕಳೆದ ಐದು ದಿನಗಳಿಂದ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿ ಚುನಾವಣಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಇದನ್ನೂ ಓದಿ: ನರೇದ್ರ ಮೋದಿಯವರು ಎಷ್ಟು ಬಾರಿ ಬಂದರೂ, ಮತದಾರರ ಮೇಲೆ ಪರಿಣಾಮ ಆಗಲ್ಲ: ಸಿದ್ದರಾಮಯ್ಯ