ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೊಟ್ಟೆ ಎಸೆತ ಪ್ರಕರಣವನ್ನು ನೆಪ ಮಾಡಿಕೊಂಡು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಮೈಸೂರಿನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊಟ್ಟೆಯನ್ನು ಯಾರೇ ಎಸೆದಿದ್ದರೂ ಅದು ತಪ್ಪು. ಆದರೆ ಅದನ್ನೇ ನೆಪ ಮಾಡಿಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದೂ ತಪ್ಪು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ವತಃ ಮುಖ್ಯಮಂತ್ರಿ ಹೇಳಿದ ಮೇಲೂ ಈ ರೀತಿ ಹಠಕ್ಕೆ ಬಿದ್ದಿರುವುದು ಸರಿಯಲ್ಲ ಎಂದರು.
ಇನ್ನು ಮುಂದಾದರೂ ಸಿದ್ದರಾಮಯ್ಯ ಅವರು ಶಾಂತ ರೀತಿಯಿಂದ ವರ್ತಿಸಲಿ. ಇದನ್ನು ಮೀರಿ ಪಾದಯಾತ್ರೆ ನಡೆಸಿದರೆ ಕೊಡಗಿನಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಏನಾದರೂ ಅನಾಹುತವಾದರೆ ಅದಕ್ಕೆ ಸಿದ್ದರಾಮಯ್ಯ ಅವರೇ ಜವಾಬ್ದಾರರಾಗಿರುತ್ತಾರೆ.
ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಟೀಕಿಸುತ್ತಿರುವುದು ಸರಿಯಲ್ಲ. ಯಾರಿಗೆ ಧರ್ಮ, ದೇಶದ ಪರಿಕಲ್ಪನೆ ಇರುವುದಿಲ್ಲವೋ ಅಂತಹವರು ಈ ರೀತಿ ಬೇಜವಾಬ್ದಾರಿತನದಿಂದ ಮಾತನಾಡುತ್ತಾರೆ. ಸಾವರ್ಕರ್ ಕುರಿತು ನೀಡುತ್ತಿರುವ ಹೇಳಿಕೆ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಸಿದ್ಧರಾಮಯ್ಯ ಇದೇ ರೀತಿ ಮುಂದುವರಿದರೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಆ ಕಾಲ ಬಹಳ ದೂರವಿಲ್ಲ ಎಂದರು.
ಸಾವರ್ಕರ್ ಅವರ ದೇಶಭಕ್ತಿಯನ್ನು ಜನರಿಗೆ ಸಾರುವ ಸಲುವಾಗಿ ರಥಯಾತ್ರೆ ನಡೆಸುತ್ತಿದ್ದೇವೆ. ಹೆಚ್ಚಿನ ಜನರನ್ನು ಸೇರಿಸದೇ ಸಾವರ್ಕರ್ ರಥಯಾತ್ರೆ ನಡೆಸುತ್ತೇವೆ. ಶಾಂತಿಯುತವಾಗಿ ರಥಯಾತ್ರೆ ನಡೆಸುತ್ತೇವೆ ಎಂದು ಹೇಳಿದರು.
ಭವ್ಯ ಸ್ವಾಗತ: ಕೇಂದ್ರ ಚುನಾವಣಾ ಮಂಡಳಿಯಲ್ಲಿ ಸ್ಥಾನ ಪಡೆದ ನಂತರ ಮೊದಲ ಬಾರಿಗೆ ಆಗಮಿಸಿದ ಯಡಿಯೂರಪ್ಪ ಅವರಿಗೆ ನಗರದ ಹೊರವಲಯದಲ್ಲಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವು ಬಿಜೆಪಿ ಮುಖಂಡರು ಸ್ವಾಗತ ಕೋರಿದರು. ಯಡಿಯೂರಪ್ಪ ಹಾಗೂ ಸಾವರ್ಕರ್ ಫೋಟೊ ಹಿಡಿದು ಕಾರ್ಯಕರ್ತರು ಜೈಕಾರ ಮೊಳಗಿಸಿದರು. ಬಿಎಸ್ವೈ ಭೇಟಿ ಸ್ಥಳಗಳಲ್ಲಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: ಕೊಡಗು ಮೊಟ್ಟೆ ಕೇಸ್: ಸಿದ್ದರಾಮಯ್ಯಗೆ ಲಭಿಸಿತು ಝೆಡ್ ಶ್ರೇಣಿಯ ಭದ್ರತೆ