ಮೈಸೂರು: ಪಿರಿಯಾಪಟ್ಟಣದಲ್ಲಿ ಅರಣ್ಯಾಧಿಕಾರಿಗಳು ಆದಿವಾಸಿಗೆ ಗುಂಡು ಹಾರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲೇನಿದೆ ?
ಆದಿಮ ಬುಡಕಟ್ಟು ಸಮುದಾಯಕ್ಕೆ ಸೇರಿದ ಕೃಷಿಕ ಬಸವ ಎಂಬ ಯುವಕ ಡಿಸೆಂಬರ್ 1 ರಂದು 10:30 ರ ವರೆಗೆ ಆದಿವಾಸಿಗಳ ಸ್ಥಳೀಯ ಸಂಘಟನೆಯಾದ ಬುಡಕಟ್ಟು ಕೃಷಿಕರ ಸಂಘದ ಸಭೆಯಲ್ಲಿ ಪಾಲ್ಗೊಂಡಿದ್ದಾನೆ. ನಂತರ ಮನೆಗೆ ತೆರಳಿ ಪಿರಿಯಾಪಟ್ಟಣ ತಾಲೂಕಿನ ರಾಣಿಗೇಟ್ ಬಳಿ ಸರ್ಕಾರ ನೀಡಿರುವ ತನ್ನ ಜಮೀನಿನ ಕೆಲಸದಲ್ಲಿ ತೊಡಗಿದ್ದಾನೆ.
ಈ ಸಂದರ್ಭದಲ್ಲಿ ಅಲ್ಲಿಗೆ ಏಕಾಏಕಿ ಬಂದ ಅರಣ್ಯ ಇಲಾಖೆ ಗಾರ್ಡ್ಗಳು ಅವನ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಆತನನ್ನು ಕುಶಾಲನಗರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸದೇ ವಿಚಾರಣೆಗೆ ಒಳಪಡಿಸಿದ್ದು, ಸಮುದಾಯದವರ ಒತ್ತಾಯದ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ. ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಹಾರಿಸಿರುವುದಲ್ಲದೇ ಅರಣ್ಯ ಇಲಾಖೆಯ ಗಾರ್ಡ್ಗಳು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಬಸವನ ಮೇಲೆ ದೂರು ದಾಖಲಿಸಿದ್ದಾರೆ.
ಬುಡಕಟ್ಟು ಸಮುದಾಯ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಅರಣ್ಯ ಇಲಾಖೆ ಗಾರ್ಡ್ಗಳ ಮೇಲೆ ಸೂಕ್ತ ತನಿಖೆಯನ್ನು ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಹಾಗೂ ಗಾಯಗೊಂಡು ಆಸ್ಪತ್ರೆ ಸೇರಿರುವ ಯುವಕನ ಚಿಕಿತ್ಸಾ ವೆಚ್ಚ ಭರಿಸಿ ಅವನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಓದಿ: ರಾಜ್ಯದಲ್ಲಿ ಪತ್ತೆಯಾಗಿರುವ ಒಮಿಕ್ರೋನ್ ಸೋಂಕಿತರ ಬಗ್ಗೆ ಮಾಹಿತಿ ನೀಡಿದ ಗೌರವ್ ಗುಪ್ತಾ