ಮೈಸೂರು: ಕರ್ನಾಟಕ ವಿಧಾನಸಭೆ 2023ರ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ನೀತಿ ಸಂಹಿತೆ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಚೆಕ್ ಪೋಸ್ಟ್ಗಳಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಇದರ ನಡುವೆ ರಾಜ್ಯದ ಹಲವು ಚೆಕ್ ಪೋಸ್ಟ್ಗಳಲ್ಲಿ ಅಕ್ರಮವಾಗಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ಮತ್ತು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಸನ್‌ಪ್ಯೂರ್ ಗಾರ್ಡನ್ ಲೇಔಟ್‌ನ ಮನೆಯೊಂದರ ಗೋದಾಮಿನ ಮೇಲೆ ದಾಳಿ ನಡೆಸಿದ ಫ್ಲೈಯಿಂಗ್ ಸ್ಕ್ವಾಡ್ ತಂಡ 19 ಲಕ್ಷ ಮೌಲ್ಯದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದೆ.
ಏ.1ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಫ್ಲೈಯಿಂಗ್ ಸ್ಕ್ವಾಡ್ ತಂಡವು, 26 ಕೆಜಿ ತೂಕದ 732 ಅಕ್ಕಿ ಚೀಲಗಳು, ಆಹಾರ ಪದಾರ್ಥಗಳಾದ ಎಣ್ಣೆ, ಸೋಪು, ರವೆ, ಪೇಸ್ಟ್ ಹಾಗೂ ಇತರೆ ಆಹಾರ ಸಾಮಾಗ್ರಿಗಳ ಒಟ್ಟು 722 ಕಿಟ್ ಬ್ಯಾಗ್‌ಗಳು, ಸನ್‌ಪ್ಯೂರ್ ಕಂಪನಿಗೆ ಸೇರಿದ ಅಡಿಗೆ ಎಣ್ಣೆಯ ತಲಾ 10 ಪೌಚ್‌ಗಳಿರುವ 146 ಬಾಕ್ಸ್‌ಗಳು, ಸನ್‌ಪ್ಯೂರ್ ಕಂಪನಿಯ ವನಸ್ಪತಿ ತಲಾ 10 ಪೌಚ್‌ಗಳಿರುವ 72 ಬಾಕ್ಸ್‌ಗಳು, ಹಂದಾರ್ಡ್ ಕಂಪನಿಯ ತಲಾ 12 ಬಾಟಲಿಗಳಿರುವ ಶರ್‌ಬತ್, 60 ಜ್ಯೂಸ್ ಬಾಕ್ಸ್ ಗಳನ್ನು ಶೇಖರಿಸಿಟ್ಟಿದ್ದು, ಈ ದಾಸ್ತಾನುಗಳ ಮೌಲ್ಯ 19,69,647 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸಿಎಸ್‌ಆರ್ ಫಂಡ್ ಮುಖಾಂತರ ಮಾಸೂಮ್ ಟ್ರಸ್ಟ್‌ಗೆ ಈ ದಾಸ್ತಾನುಗಳು ಬಂದಿದ್ದು, ಬಡ ಕುಟುಂಬಗಳಿಗೆ ಹಂಚಿಕೆ ಮಾಡಲು ಇಟ್ಟಿಕೊಂಡಿರುವುದಾಗಿ ದಾಸ್ತಾನುದಾರರು ತಿಳಿಸಿದ್ದಾರೆ. ಆದರೆ, ಈ ಸಂಬಂಧ ಸೂಕ್ತ ದಾಖಲಾತಿಗಳು ಇರಲಿಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಸೂಚನೆಯ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ತಂಡದವರು ದಾಳಿ ಮಾಡಿ, ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಜಯನಗರ ಜಿಲ್ಲೆಯ ಎರಡು ಪ್ರತ್ಯೇಕ ಪ್ರಕರಣದಲ್ಲಿ 6 ಲಕ್ಷ ರೂ ನಗದು ವಶ: ಹೊಸಪೇಟೆ ತಾಲೂಕಿನ ಭುವನಹಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷ ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಹಣವನ್ನು ಬಳ್ಳಾರಿಯಿಂದ ಹುಬ್ಬಳ್ಳಿ ಕಡೆಗೆ ಸಾಗಿಸಲಾಗುತ್ತಿತ್ತು. ಈ ಸಂಬಂಧ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2ಲಕ್ಷ ನಗದನ್ನು ಹೂವಿನ ಹಡಗಲಿ- ಮೈಲಾರ ಚೆಕ್ ಪೋಸ್ಟ್ ಚುನಾವಣೆ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಹಿರೇಕೆರೂರಿನಿಂದ ಮಾಗಳಕ್ಕೆ ತೆರಳುತ್ತಿದ್ದ ಕಾರಿನಲ್ಲಿ ಹಣ ಪತ್ತೆಯಾಗಿದ್ದು, ಹಿರೇಹಡಗಲಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಟಿಬಿ ಡ್ಯಾಂ ಚೆಕ್ ಪೋಸ್ಟ್ನಲ್ಲಿ ಹಣ ಮತ್ತು ಚಿನ್ನ ವಶ: ಹೊಸಪೇಟೆಯ ಟಿಬಿ ಡ್ಯಾಂ ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ ಹಣ ಮತ್ತು ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ತಪಾಸಣೆ ವೇಳೆ 20 ತೊಲೆ ಬಂಗಾರ, 80 ಸಾವಿರ ರೂ ನಗದು ಪತ್ತೆಯಾಗಿದೆ. ವಶಕ್ಕೆ ಪಡೆದ ಬಂಗಾರ ಅಂದಾಜು 11 ಲಕ್ಷ 50 ಸಾವಿರ ರೂ.ಗಳ ಮೌಲ್ಯದ್ದು ಎಂದು ತಿಳಿದುಬಂದಿದೆ. ಮಂತ್ರಾಲಯದಿಂದ ಬೆಂಗಳೂರು ಕಡೆಗೆ ಕಾರಿನಲ್ಲಿ ಹಣ ಮತ್ತು ಬಂಗಾರವನ್ನು ಕೊಂಡೊಯ್ಯಲಾಗುತ್ತಿತ್ತು.
ಇದನ್ನೂ ಓದಿ:ಬೆಳಗಾವಿ: ಎರಡು ಪ್ರತ್ಯೇಕ ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ 72 ಲಕ್ಷ ರೂ. ಪೊಲೀಸರ ವಶಕ್ಕೆ