ಮೈಸೂರು: ತಿ.ನರಸೀಪುರ ಪಟ್ಟಣದಲ್ಲಿ ನಿರ್ಮಾಣ ಹಂತದ ಕಟ್ಟಡಗಳ ಮಧ್ಯೆ ಸಿಲುಕಿದ್ದ ಹಸುವನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿ ಮಾನವೀಯತೆ ಮೆರದಿದ್ದಾರೆ.
ಜಿಲ್ಲೆಯ ತಿ.ನರಸೀಪುರ ಪಟ್ಟಣದ ಅಂಚೆ ಕಚೇರಿಯ ರಸ್ತೆಯಲ್ಲಿ ಮನೆಯ ನಿರ್ಮಾಣದ ಕೆಲಸ ನಡೆಯುತ್ತಿದ್ದು, ಅದರ ಪಕ್ಕದಲ್ಲಿ ಮತ್ತೊಂದು ಮನೆಯ ಕಾಂಪೌಂಡ್ ಸಹ ಇದೆ. ಇವೆರಡರ ನಡುವೆ ಸಣ್ಣದಾದ ಗಲ್ಲಿಯಲ್ಲಿ ಹಸುವೊಂದು ಮೇವಿಗಾಗಿ ನುಗ್ಗಿ, ಹಿಂದೆ ಬರಲು ಸಾಧ್ಯವಾಗದೆ ಪರದಾಡುತ್ತಿತ್ತು.
ಇದನ್ನು ಗಮನಿಸಿದ ಅಕ್ಕ ಪಕ್ಕದ ಜನರು ಗಲ್ಲಿಯಿಂದ ಆಚೆ ತರಲು ಎಷ್ಟೆ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ನಡೆಸಿ ಹಸುವನ್ನು ಗಲ್ಲಿಯಿಂದ ಆಚೆ ತೆಗೆದಿದ್ದಾರೆ.