ಮೈಸೂರು: ಐದು ವರ್ಷದಿಂದ ದರ ಪರಿಷ್ಕರಣೆಯಾಗುತ್ತಿಲ್ಲವೆಂದು ಎಂದು ಅಸಮಾಧಾನ ವ್ಯಕ್ತಪಡಿಸಿದ ತಂಬಾಕು ಬೆಳೆಗಾರರು, ತಂಬಾಕು ಮಾರುಕಟ್ಟೆ ಬಂದ್ ಮಾಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿರುವ ತಂಬಾಕು ಮಾರುಕಟ್ಟೆ ಕೇಂದ್ರದ ಮುಂದೆ ಜಮಾಯಿಸಿದ ತಂಬಾಕು ಬೆಳೆಗಾರರು, ಐದು ವರ್ಷಗಳಿಂದ ತಂಬಾಕು ದರ ಪರಿಷ್ಕರಣೆಯಾಗಿಲ್ಲ. ಅಂದಿನಿಂದ ಒಂದೇ ದರ ನಿಗದಿ ಮಾಡಿ ತಂಬಾಕು ಖರೀದಿ ಮಾಡಲಾಗುತ್ತಿದೆ. ಹೀಗಾದರೆ ನಾವು ತಂಬಾಕು ಬೆಳೆ ನಂಬಿ ಬದುಕುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಂಬಾಕು ಮಂಡಳಿ ಕಚೇರಿಗೆ ಬೀಗ ಹಾಕಿದ ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಬಂದು ಮಾತನಾಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ.