ಮೈಸೂರು: ಈಗಾಗಲೇ ಮಳೆಯಿಂದ ಕಂಗಾಲಾಗಿರುವ ಆದಿವಾಸಿಗಳಿಗೆ, ಕಾಡು ಪ್ರಾಣಿಗಳ ಉಪಟಳವೂ ಹೆಚ್ಚಾಗಿದೆ.
ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೂ ವ್ಯಾಪಿಸಿದ್ದು, ವನ್ಯಜೀವಿಗಳು ಆಹಾರ ಅರಸಿ ನಾಡಿನತ್ತ ದಾಂಗುಡಿ ಇಡುತ್ತಿವೆ.
ಎಚ್.ಡಿ.ಕೋಟೆ ತಾಲ್ಲೂಕಿನ ಬಸವಗಿರಿ ಹಾಡಿಯಲ್ಲಿರುವ ಜಮೀನಿಗೆ ನುಗ್ಗಿದ ಕಾಡಾನೆ, ಅಲ್ಲಿದ್ದ ಮುಸುಕಿನ ಜೋಳವನ್ನು ತಿನ್ನಲು ಮುಂದಾಗಿದೆ. ಬೆಳೆ ರಕ್ಷಣೆಗಾಗಿ ಹಗಲಿರುಳೆನ್ನದೆ ಜಮೀನು ಕಾಯುತ್ತಿರುವ ಆದಿವಾಸಿಗಳು, ಆನೆ ಲಗ್ಗೆ ಇಡುತ್ತಿದ್ದಂತೆ ಬೆದರಿಸಿ ಕಾಡಿಗಟ್ಟಿದ್ದಾರೆ.
ಅದೇ ಗ್ರಾಮದಲ್ಲಿ ಸೋಮಿ ಎಂಬ ವೃದ್ಧೆಯ ಮನೆ ಮಳೆಯಿಂದ ಕುಸಿದು ಬಿದ್ದಿದೆ. ಒಂದೆಡೆ ಕಾಡು ಪ್ರಾಣಿಗಳ ಉಪಟಳ ಮತ್ತೊಂದೆಡೆ ವರುಣನ ಸಿಟ್ಟಿನಿಂದ ಆದಿವಾಸಿಗಳು ಹೈರಾಣಾಗಿದ್ದಾರೆ.