ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಹಾರ ಅರಸಿ ಹೊರ ಬಂದಿದ್ದ ಕಾಡಾನೆವೊಂದು ಹುಣಸೂರಿನ ಗುರುಪುರ ಟಿಬೆಟ್ ಕ್ಯಾಂಪ್ನಲ್ಲಿ ದಾಂಧಲೆ ನಡೆಸಿದೆ.
ಹುಣಸೂರು ವೀರನಹೊಸಳ್ಳಿ ವಲಯ ವ್ಯಾಪ್ತಿಯ ಸೊಳ್ಳೇಪುರ ಕಡೆಯಿಂದ ಅರಣ್ಯ ದಾಟಿ ಹೊರ ಬಂದಿದ್ದ ಆನೆ, ಗುರುಪುರ ಟಿಬೇಟ್ ಕ್ಯಾಂಪಿನ ಜಮೀನುಗಳಲ್ಲಿ ಬಾಳೆ, ಜೋಳದ ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಕ್ಯಾಂಪಿನೊಳಗೆ ನುಗ್ಗಿದ್ದ ಆನೆಯನ್ನು ಕಂಡು ಆತಂಕಗೊಂಡ ಟಿಬೆಟಿಯನ್ನರು ಕಲ್ಲು ಹೊಡೆದು ಹಿಮ್ಮೆಟ್ಟಿಸಿದ್ದು, ನಂತರ ಅಕ್ಕಪಕ್ಕದವರ ನೆರವಿನೊಂದಿಗೆ ಸಲಗವನ್ನು ಕಾಡಿಗಟ್ಟುವ ವೇಳೆ ಕಾಡಾನೆ ಮನೆಗಳ ಬಳಿ ಧಾವಿಸಿ ಅಲ್ಲಿಯೂ ದಾಂಧಲೆ ನಡೆಸಿದೆ. ಜನರ ಕಲ್ಲಿನ ಹೊಡೆತದಿಂದ ಪಾರಾಗಲು ಪಕ್ಕದಲ್ಲಿದ್ದ ವೀರನಹೊಸಳ್ಳಿ ವಲಯದ ಕುರುಚಲು ಕಾಡು ಸೇರಿಕೊಂಡಿದೆ ಎನ್ನಲಾಗುತ್ತಿದೆ.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇಂದು ಸಂಜೆ ವೇಳೆಗೆ ಆನೆಯನ್ನು ಕಾಡಿಗಟ್ಟುವುದಾಗಿ ತಿಳಿಸಿದ್ದಾರೆ.
ತಡೆಗೋಡೆ ಕುಸಿದಿರುವುದರಿಂದ ಅರಣ್ಯವಲಯದಿಂದ ಹೊರ ಬಂದ ಆನೆ:
ವೀರನಹೊಸಳ್ಳಿ ಅರಣ್ಯ ವಲಯದ ಟಿಬೆಟ್ ಕ್ಯಾಂಪ್ ಬಳಿ ಮಳೆಯಿಂದ ತಡೆಗೋಡೆ ಕುಸಿದಿದ್ದು, ಆ ಕಡೆಯಿಂದ ಆನೆಗಳಯ ಹೊರ ಬರುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಸಮಯ ಗಸ್ತು ಕಾಯುತ್ತಿದ್ದರೂ ಅವರ ಕಣ್ತಪ್ಪಿಸಿ ಆನೆ ಹೊರ ಬಂದಿದೆ. ಸದ್ಯದಲ್ಲಿಯೇ ತಡೆಗೋಡೆಯನ್ನು ಸರಿಪಡಿಸಲಾಗುವುದು ಎಂದು ಆರ್ಎಫ್ಓ ನಮನ್ ನಾರಾಯಣ್ ನಾಯಕ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಅಬ್ಬರ ಮುಗಿತು..ಇಂದಿನಿಂದ ಹಿಂಗಾರು ಮಳೆ ಶುರು