ಮೈಸೂರು: ಪರಿಸರ ಪ್ರೇಮಿಯೊಬ್ಬರು ಸರ್ಕಾರಿ ಜಾಗದಲ್ಲಿ 100 ಕ್ಕೂ ಹೆಚ್ಚಿನ ಶ್ರೀಗಂಧ ಮರಗಳನ್ನು ಬೆಳೆಸಿ, ಮಿನಿ ಶ್ರೀಗಂಧ ವನ ಮಾಡುವ ಮೂಲಕ ಪರಿಸರ ಪ್ರೇಮವನ್ನು ಮೆರೆದಿದ್ದಾರೆ ಇಲ್ಲಿನ ಹೋಟೆಲ್ ಉದ್ಯಮಿ.
ಹೀಗೆ ಶ್ರೀಗಂಧ ಮರಗಳನ್ನು ಬೆಳೆಸಿ ಪೋಷಿಸುತ್ತಿರುವ ವ್ಯಕ್ತಿ ರಾಜೇಂದ್ರ, ಮೈಸೂರಿನ ಯಾದವಗಿರಿಯ 8 ನೇ ಮುಖ್ಯ ರಸ್ತೆಯ ನಿವಾಸಿಯಾಗಿದ್ದು, ಹೋಟೆಲ್ ಉದ್ಯಮಿಯಾಗಿದ್ದಾರೆ. ತಮ್ಮ ಮನೆ ಆವರಣದಲ್ಲಿ ಹಾಗೂ ಮುಂಭಾಗದ ಸರ್ಕಾರಿ ಜಾಗದಲ್ಲಿ ಸುಮಾರು 100 ಕ್ಕೂ ಹೆಚ್ಚಿನ ಶ್ರೀಗಂಧದ ಮರಗಳನ್ನು ಕಳೆದ 15 ವರ್ಷಗಳಿಂದ ಬೆಳೆಸಿ ಪೋಷಿಸುತ್ತಿದ್ದಾರೆ. ಕೆಲವು ಬಾರಿ ಇವರು ಬೆಳೆಸಿದ ಶ್ರೀಗಂಧದ ಮರಗಳನ್ನು ಕಳ್ಳರು ಕದ್ದಿದ್ದು, ಇದಕ್ಕಾಗಿ ಇವರು 2 ಸಿಸಿಟಿವಿ ಕ್ಯಾಮರಾಗಳನ್ನು ಸಹ ಅಳವಡಿಸಿ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ನಾನು 20 ವರ್ಷಗಳ ಹಿಂದೆ ಮೈಸೂರಿಗೆ ಬಂದು ನೆಲೆಸಿದೆ. ಮನೆಯ ಆವರಣದಲ್ಲಿ ಖಾಲಿ ಜಾಗವಿದ್ದು ಹಾಗೂ ಮನೆಯ ಮುಂಭಾಗ ಸರ್ಕಾರಿ ಜಾಗವಿದ್ದ ಕಾರಣ 100 ಶ್ರೀಗಂಧದ ಸಸಿಗಳನ್ನು ನೆಟ್ಟು ಬೆಳೆಸಿದ್ದೇನೆ. ಇದರಲ್ಲಿ 15 ವರ್ಷ ತುಂಬಿದ 6-7 ಮರಗಳಿದ್ದು, ಇದರ ಬೆಲೆ 15 ಲಕ್ಷ ಆಗಲಿದೆ. ಅಲ್ಲದೆ ಶ್ರೀಗಂಧದ ಮರಗಳಲ್ಲಿ ಬಿಡುವ ಹಣ್ಣುಗಳನ್ನು ಪಕ್ಷಿಗಳು ತಿಂದು ಬೇರೆ ಬೇರೆ ಜಾಗದಲ್ಲಿ ಬೀಸಾಡುವುದರಿಂದ ಬೇರೆ ಕಡೆಗಳಲ್ಲೂ ಮರಗಳು ಬೆಳೆದಿದೆ ಎಂದರು.
ಮೈಸೂರಿನ ಮಣ್ಣಿನಲ್ಲಿ ಬೆಳೆಯುವ ಶ್ರೀಗಂಧದ ಮರಗಳು ನೇರವಾಗಿ ಬೆಳೆಯುತ್ತದೆ. ಅಂಕುಡೊಂಕಾಗಿ ಬೆಳೆಯುವುದಿಲ್ಲ ಇದು ಅತೀ ಹೆಚ್ಚು ಸುವಾಸನೆ ಬೀರುತ್ತದೆ. ಜೊತೆಗೆ ಸರ್ಕಾರಿ ಜಾಗದಲ್ಲಿ ಸಾಮಾಜಿಕ ಅರಣ್ಯ ಕಲ್ಪನೆಯಲ್ಲಿ ಸಸಿಗಳನ್ನು ನಡೆಬಹುದು ಸುಮಾರು 18 ವರ್ಷಕ್ಕೆ ಒಂದೊಂದು ಶ್ರೀಗಂಧ ಮರ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ. ಮೈಸೂರಿನ ಮಣ್ಣಿಗೆ ಶ್ರೀಗಂಧದ ಮರ ಚೆನ್ನಾಗಿ ಬೆಳೆಯುತ್ತದೆ. ಇದನ್ನು ರೈತರು ಸಹ ಬೆಳೆಯಬಹುದು ಎಂದು ಹೋಟೆಲ್ ಉದ್ಯಮಿ ಹಾಗೂ ಪರಿಸರ ಪ್ರೇಮಿ ರಾಜೇಂದ್ರ ತಿಳಿಸಿದರು.