ಮೈಸೂರು : ಇಬ್ಬರು ಸೋದರರ ಜತೆ ಸೇರಿ ಮೂರನೇ ವ್ಯಕ್ತಿ ಜಮೀನಿನೊಂದರಲ್ಲಿ ಪಂಪ್‌ಸೆಟ್ ಜತೆಗೆ ವೈರ್ ಕದ್ದಿದ್ದರು. ಆದರೆ, ಅದನ್ನ ಹಂಚಿಕೊಳ್ಳುವ ಗಲಾಟೆಯಲ್ಲಿ ಇಬ್ಬರು ಕೊಲೆಗೀಡಾಗಿರುವ ಘಟನೆ ಹುಣಸೂರು ತಾಲೂಕಿನ ಗುರುಪುರ ಸಮೀಪದ ಗೌಡನಕಟ್ಟೆ ಗ್ರಾಮದಲ್ಲಿ ನಡೆದಿದೆ. ಹೆಚ್ಡಿ ಕೋಟೆಯ ಮುನಿಯ ಎಂಬಾತ ಇಬ್ಬರನ್ನೂ ಕೊಲೆಗೈದ ಆರೋಪಿ. ಮುನಿಯನ ಸಹೋದರ ರಾಜು ಹಾಗೂ ರಾಚಯ್ಯ ಎಂಬುವರು ಹತ್ಯೆಯಾದವರು.
ಘಟನೆಯ ವಿವರ : ಆಗಸ್ಟ್ 28ರಂದು ಹುಣಸೂರಿನ ಗೌಡನಕಟ್ಟೆ ಗ್ರಾಮದ ಜಮೀನಿನೊಂದರಲ್ಲಿ ಕೃಷಿ ಉತ್ಪನ್ನ ಕದ್ದಿದ್ದರು. ರಾಚಯ್ಯ ಇದೇ ಕದ್ದ ಮಾಲಿನಲ್ಲಿ ಸಹೋದರರಾದ ಮುನಿಯ ಮತ್ತು ರಾಜು ಬಳಿ ಪಾಲು ಕೇಳಿದ್ದ. ಆಗ ಇಬ್ಬರೂ ಸಹೋದರರು ಸೇರಿ ರಾಚಯ್ಯನನ್ನು ಹತ್ಯೆಗೈದಿದ್ದರು. ಗುರುತು ಸಿಗದಂತೆ ವೈರ್ನಿಂದ ಸುತ್ತಿ ಸುಟ್ಟು ಹಾಕಿ ಪರಾರಿಯಾಗಿದ್ದರು.
ಕೊಲೆಯಾದ ರಾಚಯ್ಯ ದೇವಾಲಯಗಳಲ್ಲಿ ಹುಂಡಿ ಕಳ್ಳತನ ಮಾಡುತ್ತಿದ್ದ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ತಿಳಿದಿದೆ. ಇನ್ನು, ಮುನಿಯ ಹಾಗೂ ರಾಜು ಪಂಪ್ ಸೆಟ್ ವೈರ್ಗಳನ್ನು ಕಳವು ಮಾಡುತ್ತಿದ್ದರಂತೆ. ಇದೇ ವಿಷಯವನ್ನು ಆಧಾರವನ್ನಾಗಿಸಿಟ್ಟುಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆದರೆ, ಮೊದಲ ಕೊಲೆಯ ಬಳಿಕ ಸಹೋದರರಿಬ್ಬರೂ ತಲೆಮರೆಸಿಕೊಂಡಿದ್ದರು. ಇವರಿಬ್ಬರ ಮಧ್ಯೆಯೂ ಕದ್ದ ಮಾಲುಗಳ ಹಂಚಿಕೆ ವಿಚಾರಕ್ಕೆ ಮತ್ತೆ ಗಲಾಟೆಯಾಗಿತ್ತು. ಈ ವೇಳೆ ಮುನಿಯ, ತಮ್ಮ ರಾಜುವಿನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕೊಲೆ ಪ್ರಕರಣ ದಾಖಲಾಗಿದೆ. ಈಗ ತಲೆಮರೆಸಿಕೊಂಡಿದ್ದ ಮುನಿಯನನ್ನು ಪಿರಿಯಾಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಳಿಕ ವಿಚಾರಣೆ ಕೈಗೊಂಡಾಗ ಮುನಿಯ, ತಮ್ಮನಾದ ರಾಜು ಹಾಗೂ ರಾಚಯ್ಯನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.