ಮೈಸೂರು: ನಾನು ಕೇಂದ್ರ ಸಚಿವೆಯಾಗಿ ಸಂತೋಷವಾಗಿದ್ದೇನೆ, ಅಲ್ಲಿಯೇ ಇರುತ್ತೇನೆ. ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಇಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು. ನಿನ್ನೆಯೇ ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಿನ್ನೆ ಸಂಜೆ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತಿ, ಅಲ್ಲಿ ಚಾಮುಂಡೇಶ್ವರಿಯಲ್ಲಿ ಮತ್ತೇ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಬೇಡಿಕೊಂಡು, ಪೂಜೆ ಸಲ್ಲಿಸಿದರು.
ಇಂದು ಬೆಳಗ್ಗೆ ಅರಮನೆಯ ಆವರಣದಲ್ಲಿ ಇರುವ ಮಾವುತ ಹಾಗೂ ಕಾವಾಡಿ ಕುಟುಂಬದವರಿಗೆ ಉಪಹಾರ ಕೂಟ ಏರ್ಪಡಿಸಿದರು. ಅಭಿಮನ್ಯು ಆನೆಗೆ ಪೂಜೆ ಸಲ್ಲಿಸಿ, ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಕರಂದ್ಲಾಜೆ, ಪ್ರತೀ ವರ್ಷದಂತೆ ಈ ವರ್ಷವೂ ಮಾವುತರಿಗೆ ಹಾಗೂ ಕಾವಾಡಿಗರಿಗೆ ಉಪಹಾರ ಕೂಟ ಏರ್ಪಡಿಸಿದ್ದೇವೆ. 2008 ರಿಂದಲೂ ಈ ಕೆಲಸ ಮಾಡುತ್ತಾ ಬರಲಾಗುತ್ತಿದೆ. ಮಾವುತ ಮತ್ತು ಕಾವಾಡಿಗರನ್ನು ಸರ್ಕಾರಿ ನೌಕರ ಎಂದು ಪರಿಗಣಿಸುವಂತೆ ಸಲ್ಲಿಸಿದ್ದ ಮನವಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರ ಸ್ಪಂದಿಸಿತ್ತು. ಇವಾಗ ಮಾವುತರು ಮತ್ತು ಕಾವಾಡಿಗರು ಖುಷಿಯಾಗಿದ್ದಾರೆ. ಅವರ ಖುಷಿಯಲ್ಲಿ ನಾನು ಪ್ರತಿ ವರ್ಷ ಭಾಗಿಯಾಗುತ್ತೇನೆ ಎಂದು ಹೇಳಿದರು.
ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕೇಂದ್ರ ಸಚಿವೆಯಾಗಿ ಸಂತೋಷವಾಗಿದ್ದೇನೆ, ಅಲ್ಲಿಯೇ ಇರುತ್ತೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಇಲ್ಲ. ಅದರ ಬಗ್ಗೆ ಮಾಹಿತಿಯೂ ನನಗೆ ಇಲ್ಲ. ನಾನು ಈ ಬಗ್ಗೆ ಚಿಂತನೆಯನ್ನೂ ಮಾಡಿಲ್ಲ. ನನಗೆ ಒಳ್ಳೆಯ ಖಾತೆ ಸಿಕ್ಕಿದೆ. ಅಲ್ಲಿಯೇ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ನನಗೆ ಯಾವ ವರಿಷ್ಠರಿಂದಲೂ ರಾಜ್ಯ ರಾಜಕಾರಣಕ್ಕೆ ಬರುವ ಕುರಿತು ಸೂಚನೆ ಬಂದಿಲ್ಲ. ಇವೆಲ್ಲ ಸುದ್ದಿ ಹೇಗೆ ಬರುತ್ತವೋ ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಅದಲ್ಲದೇ ಎರಡು ಅವಧಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದು, ಮುಂದಿನ ಬಾರಿಯೂ ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ಬೇಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಲು ನಾಳೆ ದೆಹಲಿ ಪ್ರವಾಸ: ಸದಾನಂದಗೌಡ