ಮೈಸೂರು: ಕಾವೇರಿ ನೀರು ನಿರ್ವಹಣಾ ಸಮಿತಿಯ (CWRC) ಸಭೆಯಲ್ಲಿ ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಮಾಡಿರುವ ಶಿಫಾರಸು ಅಂತಿಮ ಅಲ್ಲ. ನಾಳೆ ನಮ್ಮ ಮನವಿಯನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸುತ್ತೇವೆ. ಕೋರ್ಟ್ ನೀಡುವ ತೀರ್ಪಿನ ಅನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರಿನಲ್ಲಿಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆಗಸ್ಟ್ 30ರಂದು ನಡೆಯಲಿರುವ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮದ ಸಿದ್ಧತೆಗಳ ಪರಿಶೀಲನೆ ನಡೆಸಿ, ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ನಮಗೆ ನಮ್ಮ ರೈತರ ಹಿತರಕ್ಷಣೆ ಮುಖ್ಯ. ಈ ವಿವಾದವನ್ನು ಬಗೆಹರಿಸುವುದು ಕೂಡಾ ಅಷ್ಟೇ ಮುಖ್ಯ. ನಾವು ಬಿಟ್ಟ ನೀರು ಬಿಳಿಗುಂಡ್ಲು ಮಾಪನ ಕೇಂದ್ರ ತಲುಪಲು 5 ದಿನ ಬೇಕು. ಬೀಗ ಅವರ ಕೈಯಲ್ಲಿದೆ. ಎಷ್ಟು ನೀರು ಕೊಡುತ್ತೇವೆ ಎಂಬುದರಲ್ಲಿ ನಮಗೆ ಯಾವುದೇ ಗೊಂದಲ ಇಲ್ಲ ಎಂದರು.
ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಸಿಎಂ ಹೇಳಿಕೆ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಾವು ಕಾನೂನು ತಂಡದ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನೀರಾವರಿ ಇಲಾಖೆ ಜೊತೆ ಮಾತನಾಡಿ ತೀರ್ಮಾನ ಮಾಡಲಾಗುವುದು. ಸಂಕಷ್ಟ ಸೂತ್ರ ಅನುಸರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮ ಬಳಿಯೇ ಸೂಕ್ತ ಪ್ರಮಾಣದ ನೀರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮುಂದಿನ 15 ದಿನಗಳವರೆಗೆ ಪ್ರತಿದಿನ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಬಿಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಸಿಎಂ, ತಮಿಳುನಾಡಿಗೆ ಕರ್ನಾಟಕದಿಂದ 5 ಸಾವಿರ ಕ್ಯೂಸೆಕ್ ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ಸಭೆ ನಡೆಸಿದೆ. 15 ದಿನಗಳವರೆಗೆ ನೀರು ಹರಿಸುವಂತೆ ಇದಕ್ಕೂ ಮುನ್ನ ಹೇಳಿದ್ದರು, ಹಿಂದಿನ ಸಭೆಯಲ್ಲಿ 10 ಸಾವಿರ ಬಿಡುವಂತೆ ತಿಳಿಸಿದ್ದರು. ಆಗಸ್ಟ್ 31 ರವರಗೆ 86 ಟಿಎಂಸಿ ನೀರು ನೀಡಬೇಕಿತ್ತು, ಆದರೆ ಈವರಗೆ 30 ಟಿಎಂಸಿ ಮಾತ್ರ ನೀಡಿದ್ದೇವೆ ಎಂದರು.
ಪ್ರತಿದಿನ 24 ಸಾವಿರ ಕ್ಯೂಸೆಕ್ ನೀರು ನೀಡುವಂತೆ ಅವರು ವಾದಿಸಿದ್ದಾರೆ. ನಾವು ಕೊಡಲು ಸಾಧ್ಯವಿಲ್ಲ ಎಂದು ವಾದಿಸಿದ್ದೇವೆ. ನಮಗೆ ಕುಡಿಯುವ ನೀರಿನ ಬಗ್ಗೆ ತೀರ್ಮಾನ ಮಾಡಬೇಕು. ಬೆಳೆಗಳ ಪರಿಸ್ಥಿತಿ ನೋಡಿಕೊಳ್ಳಬೇಕಾಗಿದೆ. ನಮ್ಮಲ್ಲಿ ಮಳೆ ಬೀಳದ ಕಾರಣ ನೀರಿಲ್ಲ. ಸಂಬಂಧಪಟ್ಟ ಸಚಿವರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
"ನಿಖಿಲ್ ಕುಮಾರಸ್ವಾಮಿ ನಮ್ಮ ಹುಡುಗ": ನಿಖಿಲ್ ಕುಮಾರಸ್ವಾಮಿ ಮುಂದಿನ 5 ವರ್ಷ ಚುನಾವಣೆಗೆ ಸ್ಫರ್ಧಿಸಲ್ಲ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಿಖಿಲ್ ಭವಿಷ್ಯ ಚೆನ್ನಾಗಿರಲಿ. ಅವನು 5 ವರ್ಷ ಸಿನಿಮಾದಲ್ಲಿ ಇರಲಿ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಾನು ಅವರ ಕುಟುಂಬದ ವಿಚಾರ ಮಾತನಾಡಲ್ಲ. ನಿಖಿಲ್ ಕುಮಾರಸ್ವಾಮಿ ನಮ್ಮ ಹುಡುಗ, ಅವನಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ಗೃಹ ಲಕ್ಷ್ಮಿ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ: ಮೈಸೂರಿನ ಮಹಾರಾಜಾ ಕಾಲೇಜಿನ ಮೈದಾನದಲ್ಲಿ ಆಗಸ್ಟ್ 30 ರಂದು ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆಯ ಬೃಹತ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಸಿದ್ದತೆ ಹಾಗೂ ಫಲಾನುಭವಿಗಳಿಗೆ ಹೋಗುವ ಮೆಸೇಜ್ ಸೇರಿದಂತೆ ವಿವಿಧ ರೀತಿಯ ಸಿದ್ಧತೆಗಳ ಕುರಿತು, ರಾಜ್ಯದ ವಿವಿಧ ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಡಿ.ಕೆ.ಶಿವಕುಮಾರ್, ಅಂತಿಮ ಹಂತದ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿದ್ದರು.
ಇದನ್ನೂ ಓದಿ: ಮುಂದಿನ ಐದು ವರ್ಷ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸಲ್ಲ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ