ಮೈಸೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪರೀಕ್ಷೆಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ಕಳೆದ ಒಂದು ವಾರದಿಂದ ನಗರದಲ್ಲಿ ಕೋವಿಡ್ ಪ್ರಕರಣಗಳು 100 ರ ಗಡಿ ದಾಟುತ್ತಿವೆ. ಹೀಗಾಗಿ, ಪ್ರತಿ ದಿನ 3 ಸಾವಿರಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಆ ಮೂಲಕ ಕೋವಿಡ್ ನಿಯಂತ್ರಣ ಮಾಡಬಹುದಾಗಿದೆ. ಕೋವಿಡ್ ಹರಡುವ ಪ್ರಾಥಮಿಕ ವ್ಯಕ್ತಿಯ ಸಂಪರ್ಕ ಕಂಡುಹಿಡಿದರೆ, ಪ್ರಕರಣಗಳನ್ನು ಕಡಿಮೆ ಮಾಡಬಹುದು. ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಆದರೂ, ಜನ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು.
ಇದನ್ನೂ ಓದಿ: ಕೇರಳದಲ್ಲಿ ಕೋವಿಡ್ ಕೇಸ್ ಕಡಿಮೆ ಇವೆ, ಗಡಿಭಾಗದವರಿಗೆ ಆಂತಕ ಬೇಡ : ಸಚಿವ ಡಾ. ಸುಧಾಕರ್
ಗ್ರಾಮೀಣ ಪ್ರದೇಶಗಳಿಗಿಂತ ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ, ಮತ್ತಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಶಾಲಾ ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗುತ್ತಿದ್ದು, ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಿಸಲು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ನಮ್ಮಲ್ಲಿ ಆಕ್ಸಿಜನ್ ಮತ್ತು ಬೆಡ್ ಕೊರತೆಯಿಲ್ಲ. ಹೆಚ್ಚು ಜನ ಸೇರುವ ಜಾತ್ರೆ, ಉತ್ಸವಗಳಿಗೆ ಅನುಮತಿಯಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.