ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಚರಣೆಗಳಲ್ಲಿ ಒಂದಾದ ಖಾಸಗಿ ದರ್ಬಾರ್ ಅಕ್ಟೋಬರ್ 17 ರಿಂದ ಆರಂಭವಾಗಲಿದ್ದು, ಅರಮನೆಯಲ್ಲಿರುವ ರತ್ನಖಚಿತ ಸಿಂಹಾಸವನ್ನು ಸೆಪ್ಟೆಂಬರ್ 18 ರ ಶುಕ್ರವಾರ ಜೋಡಣೆ ಮಾಡಲಾಗುವುದು. ಈ ಹಿನ್ನೆಲೆ ಅಂದು 2 ಗಂಟೆವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಯದುವಂಶದ ಪರಂಪರೆಯಲ್ಲಿ ಖಾಸಗಿ ದರ್ಬಾರ್ ದಸರಾದ ಪ್ರಮುಖ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಚಿನ್ನದಿಂದ ತಯಾರಿಸಲಾಗಿರುವ ಶತಮಾನಗಳ ಇತಿಹಾಸವಿರುವ ರತ್ನಖಚಿತ ಸಿಂಹಾಸನದ ಮೇಲೆ 9 ದಿನಗಳ ಕಾಲ ಮಹಾರಾಜರು ಕುಳಿತು ನವರಾತ್ರಿ ಆಚರಿಸುವುದು ಸಂಪ್ರದಾಯ. ಈ ಹಿನ್ನಲೆ ಸೆಪ್ಟೆಂಬರ್ 18 ರ ಶುಕ್ರವಾರ ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೋಮ್‌ನಲ್ಲಿರುವ ಬಿಡಿ ಬಿಡಿ ರತ್ನಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್ಗೆ ತಂದು ಶುಭ ಮುಹೂರ್ತದಲ್ಲಿ ಜೋಡಿಸಲಾಗುತ್ತದೆ, ಅದಕ್ಕೂ ಮುನ್ನೆ ಬೆಳಿಗ್ಗೆ ಅರಮನೆ ರಾಜಪುರೋಹಿತರಿಂದ ಧಾರ್ಮಿಕ ಕೈಂಕರ್ಯಗಳು ನಡೆಯಲಿದ್ದು, ಬೆಳಿಗ್ಗೆ 6.30 ರಿಂದ 1.30 ಯೊಳಗೆ ಸಿಂಹಾಸನ ಜೋಡಣೆ ಆಗಲಿದೆ.
ಹೋಮ ಹವನಗಳು:
ದರ್ಬಾರ್ ಹಾಲ್‌ನಲ್ಲಿ ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 6.30 ರಿಂದ ಅರಮನೆಯ ಪುರೋಹಿತರು ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ, ಶಾಂತಿಹೋಮ ಪೂಜೆಗಳನ್ನು ನೆರವೇರಿಸಲಿದ್ದು, ರಾಜವಂಶಸ್ಥರಾದ ಪ್ರಮೋದ ದೇವಿ ಒಡೆಯರ್ ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ.
ಪಟ್ಟದ ಕುದುರೆ, ಹಸುಗಳಿಗೆ ಪೂಜೆ:
ಬೆಳಿಗ್ಗೆ 10.45 ರಿಂದ 11.10 ರ ನಡುವೆ ಪಟ್ಟದ ಕುದುರೆ, ಪಟ್ಟದ ಹಸುಗಳನ್ನು ಪೂಜಿಸಲಾಗುವುದು. ಈ ಬಾರಿ ಗಜಪಡೆಯ ಆಗಮನ ಇಲ್ಲದಿರುವುದರಿಂದ ಪಟ್ಟದ ಆನೆಯ ಕೊರತೆ ಎದ್ದು ಕಾಣಲಿದೆ. ಅದಕ್ಕೆ ಬದಲಾಗಿ ಅರಮನೆಯಲ್ಲಿರುವ ಆನೆಗಳನ್ನೇ ಬಳಸಿಕೊಳ್ಳಲು ಚಿಂತಿಸಲಾಗಿದೆ.
ಅರಮನೆ ಒಳಾಂಗಣದ ಸಿಸಿ ಕ್ಯಾಮರಾಗೆ ಪರದೆ:
ಸಿಂಹಾಸನ ಜೋಡಣೆ ಸಂದರ್ಭದಲ್ಲಿ ಅರಮನೆಯ ಒಳಾಂಗಣದ ಸಿಸಿ ಕ್ಯಾಮರಾಗಳಿಗೆ ಪರದೆ ಮುಚ್ಚಲು ಸೂಚಿಸಲಾಗಿದ್ದು, ಸ್ಟ್ರಾಂಗ್ ರೂಮ್ ಬಗ್ಗೆ ಮಾಹಿತಿ ಸೋರಿಕೆಯಾಗದಿರಲೆಂದು ಈ ಕ್ರಮ ಕೈಗೊಳ್ಳಲಾಗುತ್ತದೆ. ನವರಾತ್ರಿ ಆರಂಭದ ದಿನವಾದ ಅಕ್ಟೋಬರ್ 12 ರ ಬೆಳಿಗ್ಗೆ 5.30 ರಿಂದ 6 ಗಂಟೆವರೆಗಿನ ಅವಧಿಯಲ್ಲಿ ರತ್ನಖಚಿತ ಸಿಂಹಾಸನಕ್ಕೆ ರತ್ನಖಚಿತದ ಸಿಂಹದ ಶಿರದ ಆಕೃತಿಯನ್ನು ಜೋಡಿಸಲಾಗುವುದು.
ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ಇರುವುದರಿಂದ ಸೆಪ್ಟೆಂಬರ್ 18 ರ ಶುಕ್ರವಾರ ಅರಮನೆಗೆ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಬಾರಿ ಅರಮನೆಯಲ್ಲಿ ನವರಾತ್ರಿ ಸಾಂಪ್ರದಾಯಿಕ ಹಾಗೂ ಸರಳ ರೀತಿಯಲ್ಲಿ ನಡೆಯಲಿದ್ದು, ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 9 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸಲಿದ್ದಾರೆ.