ಮೈಸೂರು: ಒಂದೇ ರಾತ್ರಿ ಐದು ಕಡೆ ಸರಣಿ ಕಳ್ಳತನವಾಗಿದ್ದು, ಮನೆಯಲ್ಲಿ ಮಲಗಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಖದೀಮರು ಕದ್ದೊಯ್ದಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಕುಮಾರ್ ಎಂಬುವವರ ಪತ್ನಿ ಭವಾನಿ ಮನೆಯಲ್ಲಿ ಮಲಗಿರುವಾಗ ಬಾಗಿಲನ್ನು ಮೀಟಿ ಒಳಗೆ ಪ್ರವೇಶಿಸಿದ ಕಳ್ಳರು, ಕತ್ತಿನಲ್ಲಿದ್ದ ಸುಮಾರು 1.50 ಲಕ್ಷ ರೂ. ಬೆಳೆಬಾಳುವ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದಾರೆ.
ಸೋಮಪ್ಪ ಎಂಬುವವರ ಮನೆಯಲ್ಲಿ ಎರಡು ಕಬ್ಬಿಣದ ಪೆಟ್ಟಿಗೆಯಲ್ಲಿದ್ದ 5 ಗ್ರಾಂ ಮಾಂಗಲ್ಯ ಮತ್ತು 40 ಸಾವಿರ ನಗದು ಹಣ ಕಳ್ಳತನವಾಗಿದೆ. ಇನ್ನು ಕಾಡಯ್ಯ ಮತ್ತು ರಾಜಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ನಾಗೇಂದ್ರ ಎಂಬುವರ ಪಂಪ್ ಹೌಸ್ ನಲ್ಲಿ ಬಾಗಿಲುಮುರಿದು ಬೆಳೆಬಾಳುವ ವಸ್ತುಗಳನ್ನು ಖದೀಮರು ದೋಚಿದ್ದಾರೆ. ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಇನ್ನು ಈ ಸಂಬಂಧ ಹುಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ ಕಳೆದುಕೊಂಡ ಭವಾನಿ ಮಾತನಾಡಿ, ನಾನು ಮಲಗಿರುವಾಗ ಹಿಂಬಾಗಿಲಿನಿಂದ ಕಳ್ಳರು ಮನೆಗೆ ಪ್ರವೇಶಿಸಿ ನಾನು ಎಚ್ಚರಗೊಳ್ಳುವಷ್ಟರಲ್ಲೇ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದಾರೆ. ಮಾಂಗಲ್ಯ ಸರ ಮೂರು ಲಕ್ಷ ಬೆಳೆ ಬಾಳುತ್ತದೆ ಎಂದು ಹೇಳಿದರು. ಸರ ಮತ್ತು ನಗದು ಕಳೆದುಕೊಂಡ ರಾಜಮಣಿ ಮಾತನಾಡಿ, ನಮ್ಮ ಮನೆಯಲ್ಲಿ ಮಾಂಗಲ್ಯ ಸರ ಮತ್ತು 40 ಸಾವಿರ ನಗದು ಕಳ್ಳತನವಾಗಿದೆ ಎಂದರು.
ಇದನ್ನೂ ಓದಿ: ಸುಧಾ ಮೂರ್ತಿ ಹೆಸರಲ್ಲಿ ವಂಚನೆ: ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲು
ಚಾಕು ತೋರಿಸಿ ವೃದ್ಧೆಯಿಂದ ಚಿನ್ನಾಭರಣ ಕಿತ್ತೊಯ್ದ ಖದೀಮರು: ಇತ್ತೀಚಿಗೆ, ಚಾಕು ತೋರಿಸಿ ವಯೋವೃದ್ಧೆಯ ಕಿವಿಯ ಓಲೆ, ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ನಡೆದಿತ್ತು. ಸಂಗಮ ಬಾರ್ ಹಿಂಭಾಗದ ಬಡಾವಣೆಯ ಮನೆಯೊಂದರಲ್ಲಿ ಮಧ್ಯರಾತ್ರಿ ಮನೆಯ ಬಾಗಿಲು ಮುರಿದು ಪಾರ್ವತಮ್ಮ ಲಿಂಗಯ್ಯ ಗುಂತಗೋಳ ಎಂಬುವರ ಮನೆಯಲ್ಲಿ ಕೃತ್ಯ ಎಸಗಲಾಗಿತ್ತು. ಮಧ್ಯರಾತ್ರಿ ಮನೆಯ ಬಾಗಿಲು ಮುರಿದು ಕಳ್ಳರು ನುಗ್ಗಿದ್ದರು. ಈ ಸಮಯದಲ್ಲಿ ಮನೆಯಲ್ಲಿ ಇದ್ದ ವಯೋವೃದ್ಧೆ ಕಳ್ಳರ ಕೃತ್ಯಕ್ಕೆ ಪ್ರತಿರೋಧ ತೋರಿದಾಗ ಖದೀಮರು ಬಾಯಿಯಲ್ಲಿ ಬಟ್ಟೆಯನ್ನು ಇಟ್ಟು, ಚಾಕು ತೋರಿಸಿ ಬೆದರಿಕೆ ಹಾಕಿ, ಆಕೆಯ ಕತ್ತಿನಲ್ಲಿದ್ದ ಬಂಗಾರದ ಸರ, ಕಿವಿಯಲ್ಲಿದ್ದ ಓಲೆಗಳನ್ನು ಕಿತ್ತುಕೊಂಡು ಖದೀಮರು ಪರಾರಿಯಾಗಿದ್ದರು.
ಇತ್ತ ಕಿವಿಯಲ್ಲಿನ ಓಲೆಗಳನ್ನು ಕಿತ್ತುಕೊಂಡು ಇಬ್ಬರು ಯುವಕರು ಪರಾರಿಯಾಗುವ ವೇಳೆ ವೃದ್ಧೆ ಚೀರಾಡಿದ್ದಳು. ಆಗ ಸುತ್ತಮುತ್ತಲಿನ ನಿವಾಸಿಗಳು ಬಂದು ಘಟನೆಯಿಂದ ಗಾಬರಿಗೊಂಡಿದ್ದರು. ಜೊತೆಗೆ ಕಿವಿಯಲ್ಲಿದ್ದ ಓಲೆಗಳನ್ನು ಕಿತ್ತಿದ್ದರಿಂದ ವೃದ್ಧೆ ಕಿವಿಗೆ ಗಂಭೀರ ಗಾಯವಾಗಿತ್ತು. ನಂತರ ವೃದ್ಧೆಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.