ಮೈಸೂರು: ಕೋವಿಡ್ 2ನೇ ಅಲೆಗೆ ಯುವಕರೇ ಟಾರ್ಗೆಟ್ ಆಗಿದ್ದು, ಮೊದಲನೇ ಅಲೆಯಲ್ಲಿ ವಯಸ್ಸಾದವರಿಗೆ ಹೆಚ್ಚು ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು ಎಂದು ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ. ಕರ್ನಲ್ ದಯಾನಂದ ತಿಳಿಸಿದ್ದಾರೆ.
ಈ ಕುರಿತು 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ಐಸಿಎಂಆರ್ ಗೈಡ್ಲೈನ್ಸ್ ಪ್ರಕಾರ ಕೋವಿಡ್ಗೆ ಚಿಕಿತ್ಸೆ ನೀಡುತ್ತಿದ್ದೇವೆ. ಮೊದಲ ಅಲೆಯಲ್ಲಿ ವೃದ್ಧರು ಹೆಚ್ಚಾಗಿ ಕೋವಿಡ್ಗೆ ತುತ್ತಾಗುತ್ತಿದ್ದರು. ಎರಡನೇ ಅಲೆಯಲ್ಲಿ ಯುವಕರು ಮತ್ತು ಮಕ್ಕಳು ಕೋವಿಡ್ಗೆ ತುತ್ತಾಗುತ್ತಿದ್ದು, ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಬಂದರೆ ಚಿಕಿತ್ಸೆ ಸುಲಭ. ಅದನ್ನು ಬಿಟ್ಟು ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ಬಂದರೆ ಅವರಿಗೆ ಚಿಕಿತ್ಸೆ ನೀಡುವುದು ಕಷ್ಟವಾಗಲಿದೆ ಎಂದು ತಿಳಿಸಿದರು.
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲಾಗಿದೆ. ಇದರ ಜೊತೆಗೆ ಬೆಡ್, ಆಕ್ಸಿಜನ್ ಸರಿಯಾದ ಸಮಯಕ್ಕೆ ಸೀಗಬೇಕು, ಜೊತೆಗೆ ರೆಮ್ಡಿಸಿವರ್ ಕೊಡಿ ಎಂಬುದು ಕೋವಿಡ್ ರೋಗಿಗಳ ಬೇಡಿಕೆಯಾಗಿದೆ. ಆದರೆ ರೆಮ್ಡಿಸಿವರ್ ನಿಂದ ಕೋವಿಡ್ ಗುಣವಾಗುತ್ತೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಇದರಿಂದ ಕೋವಿಡ್ ನಿಂದ ಹೊರಬರಲು ಸ್ವಲ್ಪ ಮಟ್ಟಿಗೆ ಸಹಾಯವಾಗಬಹುದು ಅಷ್ಟೇ. ಆದ್ರೆ ಪೂರ್ಣ ಗುಣಮುಖವಾಗುವುದಿಲ್ಲ ಎಂದು ಮಾಹಿತಿ ನೀಡಿದರು.
ಕೋವಿಡ್ಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್ಗಳು ಇತರ ಸಿಬ್ಬಂದಿಯೂ ಕೋವಿಡ್ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ವರ್ಷ ಲಾಕ್ಡೌನ್ ನಿಂದ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.