ಮೈಸೂರು: ಕೊರೊನಾ ನಾಲ್ಕನೇ ಅಲೆ ಭೀತಿಯಿಂದಾಗಿ ಮೈಸೂರಿನಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಜೂನ್ ತಿಂಗಳಿನಲ್ಲಿ ನಾಲ್ಕನೇ ಅಲೆ ಪ್ರಾರಂಭವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಆರ್ಟಿ-ಪಿಸಿಆರ್ ಹಾಗೂ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಪ್ರಮಾಣವನ್ನು ಹೆಚ್ಚಿಸಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆ, ಕೆ.ಆರ್. ಆಸ್ಪತ್ರೆ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ.
ಖಾಸಗಿ ಆಸ್ಪತ್ರೆಗಳಲ್ಲಿಯೂ ಶ್ವಾಸಕೋಶದ ತೊಂದರೆ ಇರುವ ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ತಿಳಿಸಿದರು. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ 1,800 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 9 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಒಂಬತ್ತು ಮಂದಿ ಕೂಡ ಹೊರರಾಜ್ಯದಿಂದ ಬಂದವರಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ಪ್ರತಿನಿತ್ಯ 200 ರಿಂದ 250 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: ಸುದೀಪ್ ಕಾರ್ಯಕ್ರಮದಲ್ಲಿಅನುಚಿತ ವರ್ತನೆ.. ಯುವಕನಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ PSI
ನಂಜನಗೂಡಿನಲ್ಲಿ ಟೆಲಿ ಐಸಿಯು: ನಂಜನಗೂಡಿನಲ್ಲಿ ಟೆಲಿ ಐಸಿಯು ವಾರ್ಡ್ ಸಿದ್ಧಪಡಿಸಿದ್ದು, ಕೆ.ಆರ್.ಆಸ್ಪತ್ರೆಯ ವೈದ್ಯರು ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ವಹಣೆ ಮಾಡುವ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ. ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಸಂಭವನೀಯ ನಾಲ್ಕನೇ ಅಲೆಯನ್ನು ಎದುರಿಸಲು ಸಿದ್ದರಾಗಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಅಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್, ಐಸಿಯು ಬೆಡ್ಗಳನ್ನು ಪರಿಶೀಲಿಸಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಸಿಟಿ ಸ್ಕ್ಯಾನ್ ಹಾಗೂ ಇನ್ನಿತರ ಡಯಾಗ್ನೋಸ್ಟಿಕ್ಸ್ ಉಪಕರಣಗಳು ಸಹ ರೆಡಿ ಇದ್ದು ಸೋಂಕಿತರ ಚಿಕಿತ್ಸೆಗೆ ಜಿಲ್ಲಾಡಳಿತ ಸಂಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.