ಮೈಸೂರು: ಕರ್ನಾಟಕದ ಜನತೆಗೆ ಏಳು ವರ್ಷದ ನಂತರ ಪಂಚಲಿಂಗ ದರ್ಶನದ ಭಾಗ್ಯ ಬಂದಿದೆ. ಎಲ್ಲರಿಗೂ ಶುಭಾಶಯಗಳು, ಒಳ್ಳೆಯದಾಗಲಿ. ಕೊರೊನಾ ಮುಕ್ತ ಕರ್ನಾಟಕ ಆಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಪಂಚಲಿಂಗ ದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿಯು ನಿತ್ಯ 1,000 ಜನರಿಗೆ ದರ್ಶನಕ್ಕೆ ಅವಕಾಶ ಕೊಡಲಿದೆ. ವಿಶೇಷ ದಿನವಾದ ಡಿ.14ರಂದು 1,500 ಜನರಿಗೆ ಅವಕಾಶ ನೀಡಲಾಗುತ್ತದೆ. ಆದರೆ, ಕೊರೊನಾ ಮಾರ್ಗಸೂಚಿಗಳ ಪಾಲನೆ ಕಡ್ಡಾಯ ಎಂದರು.
2013ರಲ್ಲಿ 6-7 ಲಕ್ಷ ಜನ ಬರುತ್ತಿದ್ದ ಮಾಹಿತಿ ಇದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕಡಿಮೆ ಸಂಖ್ಯೆಗೆ ಅನುಮತಿ ನೀಡಲಾಗಿದೆ. ಪಂಚಲಿಂಗ ದರ್ಶನದ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಈ ಬಾರಿಯೂ ಮುಂದುವರೆಸಲಾಗುತ್ತಿದೆ ಎಂದು ಹೇಳಿದರು.
ವಿವಿಧ ಅಭಿವೃದ್ಧಿ ಕೆಲಸಗಳಿಗೆ ₹ 2.2 ಕೋಟಿ ದೇವಸ್ಥಾನದ ಸಮಿತಿ ಕೇಳಿದೆ. ಸ್ಥಳೀಯ ಶಾಸಕರು ಸಹ ಒಂದಷ್ಟು ಕೆಲಸ ಆಗಬೇಕು ಎಂದಿದ್ದಾರೆ. ಆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿಯವರು ಒಪ್ಪಿದ್ದಾರೆ. ಗ್ರಾಮಸ್ಥರು ₹ 20-30 ಲಕ್ಷ ಅಂದಾಜಿನ ಅಭಿವೃದ್ಧಿ ಕೆಲಸಗಳನ್ನು ಕೇಳಿದ್ದಾರೆ. ಸಂಬಂಧಪಟ್ಟ ಇಲಾಖೆಗೆ ಅದನ್ನು ವಹಿಸಲಾಗುವುದು ಎಂದರು.
ರಸ್ತೆ ಅಗಲಿಕರಣ ಸಂದರ್ಭದಲ್ಲಿ ಪರಿಹಾರ ನೀಡಬೇಕಾದವರಿಗೆ ಪರಿಹಾರ ನೀಡಲು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಲಾಗಿದೆ. ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಉನ್ನತೀಕರಿಸಲು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.