ಮೈಸೂರು: ರಾಜ್ಯ ಸರ್ಕಾರವು ಪಠ್ಯ ಪರಿಷ್ಕರಣೆಗೆ ಮುಂದಾಗಿದ್ದು, ಮಕ್ಕಳ ಅನುಕೂಲಕ್ಕೆ ತಕ್ಕಂತೆ ಪಠ್ಯ ಬದಲಾಯಿಸಿದರೆ ಅದರಲ್ಲಿ ತಪ್ಪೇನು? ಎಂದು ಕಾಂಗ್ರೆಸ್ ನಾಯಕಿ ಗೀತಾ ಶಿವರಾಜ್ಕುಮಾರ್ ಹೇಳಿದರು. ಈ ಮೂಲಕ ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಒಳ್ಳೆಯ ವಿಚಾರಗಳು ಮಾತ್ರ ಇರಬೇಕು. ಈ ಕಾರಣಕ್ಕಾಗಿ ಪಠ್ಯಪುಸ್ತಕ ಬದಲಾವಣೆ ಆದರೆ ಒಳ್ಳೆಯದು ಎಂದರು. ಒಂದೊಂದು ಸರ್ಕಾರ ಒಂದೊಂದು ರೀತಿಯಲ್ಲಿ ಪಠ್ಯ ಬದಲಾವಣೆ ಮಾಡುವ ಕ್ರಮದಿಂದ ಮಕ್ಕಳಲ್ಲಿ ಗೊಂದಲ ಆಗುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು.
ನಾನು ಇಲ್ಲಿ ಈ ವಿಚಾರಗಳ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಮಕ್ಕಳ ಒಳ್ಳೆಯದಕ್ಕೆ ಪಠ್ಯ ಬದಲಾವಣೆ ಮಾಡಿದರೆ ಒಳ್ಳೆಯದು ಅಲ್ಲವೇ ಎಂದು ಹೇಳಿದರು. ಬಳಿಕ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಸೌಜನ್ಯಯುತ ಭೇಟಿಯಾಗಿತ್ತು ಅಷ್ಟೇ. ಚುನಾವಣಾ ಪ್ರಚಾರದ ನಂತರ ಭೇಟಿ ಮಾಡಿರಲಿಲ್ಲ. ಈ ಕಾರಣದಿಂದ ಅವರನ್ನು ಮೊನ್ನೆ ಭೇಟಿ ಮಾಡಿದ್ದೆವು" ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಇಲ್ಲಿ ಈ ವಿಚಾರ ಮಾತನಾಡುವುದಿಲ್ಲ. ಇದು ಸೂಕ್ತ ಸ್ಥಳ ಅಲ್ಲ. ರಾಜಕೀಯ ಮಾತನಾಡಲ್ಲ. ಮುಂದೊಂದು ದಿನ ಈ ಬಗ್ಗೆ ಮಾತನಾಡುತ್ತೇನೆ" ಎಂದು ಹೇಳುವ ಮೂಲಕ ಕುತೂಹಲ ಕಾಯ್ದಿರಿಸಿಕೊಂಡರು. ಬಳಿಕ ಶಕ್ತಿಧಾಮದ ಮಕ್ಕಳೊಂದಿಗೆ ಕುಕ್ಕರಹಳ್ಳಿ ಕೆರೆಯಲ್ಲಿ ಪಕ್ಷಿ ವೀಕ್ಷಣೆ ಮಾಡಿದರು.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಶೀಘ್ರವೇ ಶಿಕ್ಷಣಾಸಕ್ತರ ಸಭೆ ನಡೆಸಲು ಬಿಜೆಪಿ ನಿರ್ಧಾರ
ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೇವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್ ಹಾಗೂ ಚಿಂತಕ ಸೂಲಿಬೆಲೆ ಚಕ್ರವರ್ತಿ ಕುರಿತಾದ ಪಾಠ ತೆಗೆಯಲು ತೀರ್ಮಾನಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಆರ್ಎಸ್ಎಸ್ ಮುಖಂಡ ಹೆಡ್ಗೇವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್ ಹಾಗೂ ಚಿಂತಕ ಸೂಲಿಬೆಲೆ ಚಕ್ರವರ್ತಿಯವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಮೊದಲು ತಿಳಿಸಿದ್ದರು.
ಈ ಹಿಂದೆ ಇದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಸಾವಿತ್ರಿಬಾಯಿ ಪುಲೆ ಅವರ ವಿಷಯವನ್ನು ತೆಗೆದಿತ್ತು. ಅದನ್ನು ಮರಳಿ ಸೇರಿಸಲಾಗಿದೆ. ನೀ ಹೋದ ಮರುದಿನ ಅಂಬೇಡ್ಕರ್ ಅವರ ಬಗೆಗಿನ ಕವನ, ಮಗಳಿಗೆ ಬರೆದ ಪತ್ರ ಎಂಬ ನೆಹರೂ ಅವರದ್ದನ್ನೂ ಸಹ ಮರಳಿ ಸೇರಿಸಲಾಗುತ್ತಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ರಾಜಪ್ಪ ದಳವಾಯಿ, ರಮೇಶ್ ಕುಮಾರ್, ಪಿ.ಆರ್ ಚಂದ್ರಶೇಖರ್, ಅಶ್ವತ್ಥನಾರಾಯಣ ಹಾಗೂ ರಾಜೇಶ್ ಸೇರಿದಂತೆ ಐದು ಮಂದಿಯ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ಸಮಿತಿ ಮುಂದಿನ ದಿನಗಳಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವರದಿ ನೀಡಲಿದೆ ಎಂದು ಅವರು ಮಾಹಿತಿ ನೀಡಿದ್ದರು.