ಮೈಸೂರು: ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಹಾಗೂ ಅವರ ಆಪ್ತ ಸಹಾಯಕ ಕಚೇರಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಮಾನವ ಹಿತರಕ್ಷಣಾ ಮತ್ತು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ರಾಜ್ಯ ಕಾರ್ಯದರ್ಶಿ ಎಸ್.ವಂದನಾ ಹಾಗೂ ಅಕ್ಷಯ್ ಅಂಬೇಕರ್ ಸೇರಿ ಇತರರ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೆ.13ರಂದು ಕುಲಪತಿಯವರ ಕಚೇರಿಗೆ ಭೇಟಿ ನೀಡಿದ್ದ ಇವರು, ನಾವು ಕೇಳಿದ ಮಾಹಿತಿ ಕೊಡಬೇಕೆಂದು ಏರುಧ್ವನಿಯಲ್ಲಿ ಕೂಗಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಮಾಹಿತಿ ನೀಡದಿದ್ದರೆ ವಿವಿಗೆ ಭೇಟಿ ನೀಡುವ ನ್ಯಾಕ್ ಸಮಿತಿ ಎದುರು ಪ್ರತಿಭಟನೆ ನಡೆಸುವುದಾಗಿ ಹೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಂದು ಸಂಜೆಯೇ ಮಾನವ ಹಿತರಕ್ಷಣಾ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯವರು ಕೇಳಿದ ಮಾಹಿತಿಯನ್ನು ಪೊಲೀಸರ ಸಮ್ಮುಖದಲ್ಲಿ ನೀಡಲಾಗಿದೆ ಎಂದು ಕುಲಸಚಿವ ಆರ್.ಶಿವಪ್ಪ ತಿಳಿಸಿದ್ದಾರೆ.
ಕುಲಪತಿಯವರು ಕಾನೂನಾತ್ಮಕವಾಗಿ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು, ತೊಂದರೆ ನೀಡುವುದು ಶಿಕ್ಷಾರ್ಹ ಅಪರಾಧವಾಗಿರುವುದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಮೈಸೂರು ವಿವಿ ಮತ್ತು ಅದರ ಘನತೆಗೆ ನ್ಯಾಯ ಒದಗಿಸುವಂತೆ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸೆ.15 ರಿಂದ 19ರ ವರೆಗೆ ಮೈಸೂರು ವಿವಿಗೆ ನ್ಯಾಕ್ ಸಮಿತಿ ಭೇಟಿ ನೀಡಲಿದ್ದು, ವಿವಿಯ ಪ್ರಗತಿ ಮೌಲ್ಯ ಮಾಪನ ನಡೆಸಲಿದೆ.
ಇದನ್ನೂ ಓದಿ: 9 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂಸ್ವಾಧೀನ ಅಧಿಕಾರಿಗಳು ಎಸಿಬಿ ಬಲೆಗೆ