ಮೈಸೂರು: ಪಾರಂಪರಿಕ ಲಲಿತ ಮಹಲ್ ಹೋಟೆಲ್ನ ಸುತ್ತಮುತ್ತ ಹೆಲಿಟೂರಿಸಂಗಾಗಿ ಮರಗಳನ್ನು ಕಡಿಯಲು ಹೊರಟಿರುವ ಸರ್ಕಾರದ ವಿರುದ್ಧ ಪರಿಸರ ಪ್ರೇಮಿಗಳು ನ್ಯಾಯಲಯದಲ್ಲಿ ದೂರು ದಾಖಲಿಸಿ, ಆನ್ಲೈನ್ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಹೆಲಿಟೂರಿಸಂ ಮಾಡಲು ಪಾರಂಪರಿಕ ಲಲಿತ ಮಹಲ್ ಹೋಟೆಲ್ ಬಳಿ ಇರುವ ಕಿರು ಅರಣ್ಯದ 123 ಮರಗಳನ್ನು ಕಡಿಯಲು ಗುರುತಿಸಿದೆ. ಆದರೆ 800ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ವಿರುದ್ಧ 42 ಸಾವಿರಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಆನ್ಲೈನ್ನಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಅಲ್ಲದೇ ಪರಿಸರ ಹೋರಾಟಗಾರ್ತಿ ಭಾನು ಮೋಹನ್ ಅವರು ರಾಷ್ಟ್ರಪತಿ ಹಾಗೂ ಹಸಿರು ಪೀಠಕ್ಕೆ ದೂರು ನೀಡಿದ್ದಾರೆ.
ಈ ಕುರಿತು 'ಈಟಿವಿ ಭಾರತ'ನೊಂದಿಗೆ ಮಾತನಾಡಿದ ಭಾನು ಮೋಹನ್ ಅವರು, ಲಲಿತ್ ಮಹಲ್ ಹೋಟೆಲ್ನ ಸುತ್ತಮುತ್ತ ಇರುವ ಕಿರು ಅರಣ್ಯದಲ್ಲಿ ಬೆಲೆ ಬಾಳುವ ಮರಗಳಿವೆ. ಪ್ರಮುಖವಾಗಿ ನವಿಲು ಸೇರಿದಂತೆ ಇತರ ಪ್ರಾಣಿ ಸಂಕುಲದ ವಾಸ ಸ್ಥಾನವಿದ್ದು, ಹೆಲಿಟೂರಿಸಂ ಮಾಡಿದರೆ ಆ ಸಂಕುಲಕ್ಕೆ ತೊಂದರೆಯಾಗುತ್ತದೆ. ಪರಿಸರ ನಾಶಮಾಡಿ ಅಭಿವೃದ್ಧಿ ಬೇಡ, ಇದರ ವಿರುದ್ಧ ಈಗಾಗಲೇ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ರಾಷ್ಟ್ರಪತಿಗೆ ಹಾಗೂ ಹಸಿರು ಪೀಠಕ್ಕೆ ದೂರು ಸಲ್ಲಿಸಲಾಗಿದೆ ಎಂದರು.